ಅರ್ನಾಬ್ ಗೋಸ್ವಾಮಿ, ಅಮಿತ್ ಮಾಳವಿಯಾ ವಿರುದ್ಧದ ಎಫ್‌ಐಆರ್‌ಗೆ ತಡೆ; ಟರ್ಕಿಯಲ್ಲಿ ಐಎನ್‌ಸಿ ಕಚೇರಿ ಎಂದು ಬಿಂಬಿಸಿದ ವಿವಾದ
- by Ramya B T
- May 22, 2025
- 64 Views

ಬೆಂಗಳೂರು: ಟರ್ಕಿಯ ಇಸ್ತಾನ್‌ಬುಲ್‌ನ ಕಾಂಗ್ರೆಸ್ ಕಚೇರಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಕಚೇರಿ ಎಂದು ಬಿಂಬಿಸಿ ಟ್ವೀಟ್ ಮಾಡಿದ್ದ ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಹಾಗೂ ಆ ಕುರಿತ ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ರಿಪಬ್ಲಿಕ್ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಜತಗೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಫೋಟೋಗಳನ್ನು ಎಡಿಟ್ ಮಾಡಿ ಟ್ವೀಟ್ ಮಾಡಿದ ಆರೋಪದಲ್ಲಿ ಅಮಿತ್ ಮಾಳವಿಯಾ ವಿರುದ್ಧ ದಾಖಲಾಗಿರುವ ಮತ್ತೊಂದು ಎಫ್‌ಐಆರ್‌ಗೂ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಅಮಿತ್ ಮಾಳವಿಯಾ ಹಾಗೂ ಅರ್ನಾಬ್ ಗೋಸ್ವಾಮಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಪ್ರಕರಣಗಳಿಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಮಾಳವಿಯಾ ಹಾಗೂ ಅರ್ನಾಬ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಅರ್ನಾಬ್ ಗೋಸ್ವಾಮಿ ತಮ್ಮ ರಿಪಬ್ಲಿಕ್ ಟಿವಿಯಲ್ಲಿ ಈ ಸುದ್ದಿ ಪ್ರಸಾರ ಮಾಡಿ, ದೇಶದಲ್ಲಿ ನಡೆಯುತ್ತಿರುವ ಘಟನೆ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಟರ್ಕಿ ನಡೆದುಕೊಂಡಿದೆ. ಅಲ್ಲಿ ಕಾಂಗ್ರೆಸ್ ತನ್ನ ಕಚೇರಿ ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದೇ ವಿಚಾರವನ್ನು ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಿಸಲಾಗಿದ್ದು, ತಪ್ಪಾದ ಚಿತ್ರವನ್ನು ಬಳಕೆ ಮಾಡಲಾಗಿತ್ತು. ಬಳಿಕ, ಅದನ್ನು ತೆಗೆದು ತಿದ್ದುಪಡಿ ಪ್ರಕಟಿಸಲಾಗಿದೆ. ಇದೊಂದು ಅಚಾತುರ್ಯದಿಂದ ನಡೆದ ಘಟನೆಯಾಗಿದ್ದು, ಯಾವುದೇ ಅಪರಾಧವಾಗುವಂಥ ಪ್ರಕರಣವಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಾಸಿಕ್ಯೂಷನ್ ವಾದವೇನು?
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ಅಪಪ್ರಚಾರ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಪಟದ ಸುಳ್ಳು ಸುದ್ದಿಯನ್ನು ಪ್ರಕಟಿಸಲಾಗಿದೆ. ರಿಪಬ್ಲಿಕ್ ಟಿವಿ ತಿದ್ದುಪಡಿ ಪ್ರಕಟಿಸಿರಬಹುದು, ಮಧ್ಯಪ್ರದೇಶದಲ್ಲಿ ಸಚಿವರೊಬ್ಬರು ಕರ್ನಲ್ ಸೋಫಿಯಾ ಕುರೇಷಿ ವಿರುದ್ಧ ವ್ಯಕ್ತಪಡಿಸಿದ್ದ ಅಭಿಪ್ರಾಯದ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. ಅರ್ನಾಬ್ ಅವರನ್ನು ಬಂಧಿಸಲು ಪೊಲೀಸರು ಹೋಗಿದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ ಪೊಲೀಸರು ಅರ್ನಾಬ್ ಅವರಿಗೆ ನೋಟಿಸ್ ನೀಡಲಷ್ಟೇ ತೆರಳಿದ್ದರು. ಅವರಿಗೆ ನೋಟಿಸ್ ನೀಡಲಾಗಿದೆ. ಅರ್ನಾಬ್ ಮತ್ತು ಮಾಳವಿಯಾ ತನಿಖೆಗೆ ಸಹಕರಿಸಬೇಕು ಎಂದರು.
ಮತ್ತೊಂದು ಪ್ರಕರಣಕ್ಕೂ ತಡೆ:
ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಫ್ ಮುನೀರ್‌ನ ಅರ್ಧ ಮುಖದೊಂದಿಗೆ ರಾಹುಲ್ ಗಾಂಧಿಯ ಮತ್ತರ್ಧ ಮುಖವನ್ನು ಎಡಿಟ್ ಮಾಡಿದ್ದ ಫೋಟೋ ಒಂದನ್ನು ಪ್ರಕಟಿಸಿ, “ರಾಹುಲ್ ಗಾಂಧಿ ಅವರು ಪಾಕಿಸ್ತಾನ ಮತ್ತದರ ಪೋಷಕರ ಭಾಷೆಯಲ್ಲಿ ಮಾತನಾಡುವುದು ಆಶ್ವರ್ಯಕರವೇನಲ್ಲ” ಎಂಬ ಒಕ್ಕಣೆಯೊಂದಿಗೆ ಟ್ವೀಟ್ ಮಾಡಿದ ಆರೋಪ ಸಂಬಂಧ ದಾಖಲಾಗಿರುವ ಪ್ರಕರಣಕ್ಕೂ ಹೈಕೋರ್ಟ್ ತಡೆ ನೀಡಿದೆ.
ಅಮಿತ್ ಮಾಳವಿಯಾ ಪರ ವಾದ ಮಂಡಿಸಿದ ಅರುಣ್ ಶ್ಯಾಮ್, ಈ ಪ್ರಕರಣದ ಸಂಬಂಧ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 353 ಅಡಿ ಪ್ರಕರಣ ದಾಖಲಿಸಲಾಗಿದೆ. ಮೊದಲಿಗೆ ಬಿಎನ್‌ಎಸ್ ಸೆಕ್ಷನ್ 352 ಅಡಿ ಪ್ರಕರಣ ದಾಖಲಿಸಿ, ಆನಂತರ ಅದನ್ನು ತಿರುಚಿ ಜಾಮೀನುರಹಿತ ಅಪರಾಧವನ್ನಾಗಿಸಲು ಬಿಎನ್‌ಎಸ್ ಸೆಕ್ಷನ್ 353 ಅನ್ವಯಿಸಲಾಗಿದೆ. ಆನಂತರ, ನೋಟಿಸ್ ನೀಡಲಾಗಿದೆ. ಈ ಮೂಲಕ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸುವ ಕೆಲಸ ಮಾಡಲಾಗಿದೆ. ಪ್ರಕರಣ ದಾಖಲಿಸುವ ಯಾವ ಅಂಶಗಳೂ ದೂರಿನಲ್ಲಿ ಇಲ್ಲ. ಈ ಟ್ವೀಟ್ ಹೆಚ್ಚೆಂದರೆ ಮಾನಹಾನಿಕಾರವಷ್ಟೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಜಗದೀಶ್, ದೂರುದಾರರೇ ತಮ್ಮ ದೂರಿನಲ್ಲಿ ಅಮಿತ್ ಮಾಳವಿಯಾ ಎಸಗಿರುವ ಕೃತ್ಯ ಬಿಎನ್‌ಎಸ್ ಸೆಕ್ಷನ್ 353 ಅಡಿ ಅಪರಾಧವಾಗಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಸಾಮಾನ್ಯ ವ್ಯಕ್ತಿಯಲ್ಲ. ವಿಪಕ್ಷ ನಾಯಕ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
Related Articles
Thank you for your comment. It is awaiting moderation.
Comments (0)