ಲೋಕಸಭೆ ಚುನಾವಣೆ ವೇಳೆ ₹4.8 ಕೋಟಿ ಪತ್ತೆ; ಸಂಸದ ಕೆ. ಸುಧಾಕರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
- by Prashanth Basavapatna
- June 30, 2025
- 262 Views

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ವೇಳೆ ಯಲಹಂಕ ವಿಧಾನಾಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದಾವರ ಗೋವಿಂದಪ್ಪ ಅವರ ಮನೆಯಲ್ಲ 4.8 ಕೋಟಿ ರೂ. ಹಣವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಜಪ್ತಿ ಮಾಡಿದ ಸಂಬಂಧ ಬಿಜೆಪಿ ಸಂಸದ ಡಾ. ಕೆ ಸುಧಾಕರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ವಿಚಾರಣಾ ನ್ಯಾಯಾಲಯ ಜೂನ್ 13ರಂದು ಸುಧಾಕರ್ ಮತ್ತು ಮಾದಾವರ ಗೋವಿಂದಪ್ಪ ವಿರುದ್ಧದ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದ ಆದೇಶ ರದ್ದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ಈ ಮಧ್ಯಂತರ ಆದೇಶ ಮಾಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇರೊಬ್ಬರ ಮನೆಯಲ್ಲಿ ನಗದು ಪತ್ತೆಯಾಗಿತ್ತು. ಅದಕ್ಕೆ ಸುಧಾಕರ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 171 ಎಫ್ (ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ) ಅಡಿ ಪ್ರಕರಣ ದಾಖಲಿಸಲಾಗಿದೆ. ಬೇರೊಬ್ಬರ ಮನೆಯಲ್ಲಿ ನಗದು ಪತ್ತೆಯಾದರೆ ಸೆಕ್ಷನ್ 171ಎಫ್ ಅನ್ವಯಿಸಲಾಗದೆಂದು ಇದೇ ಹೈಕೋರ್ಟ್ ಆದೇಶ ಮಾಡಿದೆ. ಈ ಹಿಂದೆ ಅಂತಹ ಹಲವು ಪ್ರಕರಣಗಳನ್ನು ಹೈಕೋರ್ಟ್ ರದ್ದು ಮಾಡಿತ್ತು ಎಂದರು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ಹೊಸದಾಗಿ ಸಂಜ್ಞೇ ಪ್ರಕ್ರಿಯೆ ಪಾಲಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿತಲ್ಲದೆ, ನೆಲಮಂಗಲ ಉಪ ವಿಭಾಗದಲ್ಲಿರುವ ಮಾದನಾಯಕನಹಳ್ಳಿ ಪೊಲೀಸರು ಮತ್ತು ದೂರುದಾರ ದಶರಥ ಕುಂಬಾರ್ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಪ್ರಕರಣವೇನು?
ಲೋಕಸಭೆ ಚುನಾವಣೆ ವೇಳೆ 2024ರ ಏಪ್ರಿಲ್ 25ರಂದು ಮಾದರಿ ನೀತಿ ಸಂಹಿತೆ (ಎಂಸಿಸಿ) ಅಧಿಕಾರಿ ಮುನೀಶ್ ಮೌದ್ಗಿಲ್ ಅವರ ಮೊಬೈಲ್ಗೆ ಒಂದು ಕಡೆ 10 ಕೋಟಿ ರೂ.ಗಳನ್ನು ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಇಡಲಾಗಿದೆ ಎಂಬ ಮಾಹಿತಿ ಬಂದಿತ್ತು. ಅದರಂತೆ, ಮಾದಾವರ ಗ್ರಾಮದ ಗೋವಿಂದಪ್ಪ ಎಂಬುವರ ಮನೆ ಮೇಲೆ ಚುನಾವಣಾಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾಗ 4.8 ಕೋಟಿ ಹಣ ಜಪ್ತಿ ಮಾಡಲಾಗಿತ್ತು ಎಂದು ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡದ ಸದಸ್ಯ ದಶರಥ್ ವಿ.ಕುಂಬಾರ್ ದೂರು ನೀಡಿದ್ದರು.
ಈ ವೇಳೆ ಅಧಿಕಾರಿ ಮುನೀಶ್ ಮೌದ್ಗಿಲ್ಗೆ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುಧಾಕರ್ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ ಸಹಾಯ ಮಾಡುವಂತೆ ವಾಟ್ಸ್ಆ್ಯಪ್ ಕರೆ, ಮೆಸೇಜ್ ಮಾಡಿದ ಆರೋಪ ಎದುರಾಗಿತ್ತು. ಪತ್ತೆಯಾಗಿದ್ದ ಹಣವನ್ನು ಮತದಾರರಿಗೆ ನೀಡಲು ಮುಂದಾಗಿದ್ದರು ಎಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿತ್ತು.
ಕೆ. ಸುಧಾಕರ್, ಗೋವಿಂದಪ್ಪ ಮತ್ತಿತರರ ವಿರುದ್ಧ ಐಪಿಸಿ ಸೆಕ್ಷನ್ 171ಇ, 171ಎಫ್, 171 ಬಿ, 171ಸಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 123ರ ಅಡಿ ಎಫ್ಐಆರ್ ದಾಖಲಿಸಿದ್ದ ಪೊಲೋಸರು ತನಿಖೆ ನಡೆಸಿ, ಆರೋಪಪಟ್ಟಿ ಸಲ್ಲಿಸಿದ್ದರು. ಮೊದಲು ಸುಧಾಕರ್ ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಆಗ ಹೈಕೋರ್ಟ್ ಹೊಸದಾಗಿ ಪ್ರಕ್ರಿಯೆ ಆರಂಭಿಸುವಂತೆ ಆದೇಶ ನೀಡಿತ್ತು. ಅದರಂತೆ ವಿಶೇಷ ನ್ಯಾಯಾಲಯ ಮತ್ತೆ ಸಂಜ್ಞೇ ಪರಿಗಣಿಸಿ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಕೆ.ಸುಧಾಕರ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
Related Articles
Thank you for your comment. It is awaiting moderation.
Comments (0)