ಹಿಂದು ಸಮ್ಮೇಳನಕ್ಕೆ ಸೂಲಿಬೆಲೆ, ಹಾರಿಕಾ ನಿರ್ಬಂಧಿಸಿದ್ದ ಬೆಳಗಾವಿ ಪೊಲೀಸರ ನೋಟಿಸ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು/ಧಾರವಾಡ: ಬೆಳಗಾವಿಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಫೆಬ್ರವರಿ 6 ಮತ್ತು 8ರಂದು ಹಮ್ಮಿಕೊಳ್ಳಲಾಗಿರುವ ಹಿಂದು ಸಮ್ಮೇಳನದಲ್ಲಿ ಭಾಗವಹಿಸದಂತೆ ಚಕ್ರವರ್ತಿ ಸೂಲಿಬೆಲೆ ಮತ್ತು ಹಾರಿಕಾ ಮಂಜುನಾಥ್‌ ಅವರನ್ನು ನಿರ್ಬಂಧಿಸಿ ಹೊರಡಿಸಲಾಗಿದ್ದ ಪೊಲೀಸ್‌ ನೋಟಿಸ್‌ಗಳನ್ನು ಹೈಕೋರ್ಟ್‌ ಧಾರವಾಡ ಪೀಠ ರದ್ದುಪಡಿಸಿದೆ.

ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅನುಮತಿ ನಿರಾಕರಿಸಿ 2026ರ ಜನವರಿ 22ರಂದು ಬೆಳಗಾವಿ ಪೊಲೀಸರು ಹೊರಡಿಸಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ಹಿಂದು ಸಮ್ಮೇಳನ ಸಮಿತಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಗುರುವಾರ (ಫೆಬ್ರವರಿ 5) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?
ಚಕ್ರವರ್ತಿ ಸೂಲಿಬೆಲೆ ಹಾಗೂ ಹಾರಿಕಾ ಅವರು ಉಂಟು ಮಾಡಬಹುದಾದ ಸಮಸ್ಯೆಗೆ ಸಂಬಂಧಿಸಿದಂತೆ ಪುರಾವೆಗಳಿಲ್ಲದೆಯೇ, ಅವರ ವಿರುದ್ಧ ಕೆಲ ಪ್ರಕರಣಗಳು ದಾಖಲಾಗಿವೆ ಎಂಬ ಕಾರಣಕ್ಕೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವುದನ್ನು ನಿಷೇಧಿಸಲು ಸಾಧ್ಯವಿಲ್ಲ. ಆಕ್ಷೇಪಾರ್ಹ ನೋಟಿಸ್‌ಗಳು ಕಾರಣರಹಿತ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ನಿಜವಾದ ಅಥವಾ ತಕ್ಷಣದ ಅಪಾಯ ಎದುರಾಗಿದೆ ಎಂಬುದನ್ನು ತೋರಿಸಲು ವಿಫಲವಾಗಿವೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪೊಲೀಸರು ಮಾಡಿರುವ ಆದೇಶವು ಸಕಾರಣಗಳನ್ನು ಹೊಂದಿಲ್ಲ. ಈ ರೀತಿಯಲ್ಲಿ ಜನರ ಮೂಲಭೂತ ಹಕ್ಕುಗಳನ್ನು ಪೊಲೀಸರು ಕಸಿಯಲಾಗದು. ಭಾಷಣಕಾರರ (ಸೂಲಿಬೆಲೆ, ಹಾರಿಕಾ) ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದ ಮಾತ್ರಕ್ಕೆ ಪೊಲೀಸರು ಸಮ್ಮೇಳದಲ್ಲಿ ಅರ್ಜಿದಾರರು ಭಾಗವಹಿಸದಂತೆ ನಿರ್ಬಂಧಿಸಲಾಗದು ಎಂದು ತಿಳಿಸಿರುವ ನ್ಯಾಯಪೀಠ, ಪೊಲೀಸ್ ನೋಟಿಸ್‌ಗಳನ್ನು ರದ್ದುಪಡಿಸಿ ಆದೇಶಿಸಿದೆ.

ಇದೇ ವೇಳೆ, ಅನುಮತಿ ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿಗಳನ್ನು ಕರ್ನಾಟಕ ಪೊಲೀಸ್‌ ಕಾಯ್ದೆಯ ಅನುಸಾರ ಪರಿಗಣಿಸಿ, ಸೂಕ್ತ ಆದೇಶ ಮಾಡಬೇಕು ಎಂದು ಪ್ರತಿವಾದಿ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್‌ ಶ್ಯಾಮ್‌ ವಾದ ಮಂಡಿಸಿ, ಕಾರ್ಯಕ್ರಮದ ಭಾಷಣಕಾರರಾದ ಚಕ್ರವರ್ತಿ ಸೂಲಿಬೆಲೆ ಹಾಗೂ ಹಾರಿಕಾ ಮಂಜುನಾಥ್ ಅವರು ಈ ಹಿಂದೆ ಇಂಥ ಐದು ಸಮ್ಮೇಳನಗಳಲ್ಲಿ ಭಾಗವಹಿಸಿದ್ದು, ಎಲ್ಲಿಯೂ ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಾಗಿಲ್ಲ. ಅರ್ಜಿದಾರರಿಗೆ ಪ್ರತಿಕ್ರಿಯಿಸಲು ಅವಕಾಶ ನೀಡದೇ ಪೊಲೀಸರು ಆಕ್ಷೇಪಾರ್ಹ ಆದೇಶಗಳನ್ನು ಹೊರಡಿಸಿದ್ದು, ಅವುಗಳನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.

ಸರ್ಕಾರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಜೆ.ಎಂ. ಗಂಗಾಧರ್‌ ಅವರು, ಈ ಇಬ್ಬರೂ ಭಾಷಣಕಾರರು ಈ ಹಿಂದೆ ಭಾಗವಹಿಸಿರುವ ಕಾರ್ಯಕ್ರಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಾಗಿವೆ. ಈಗ ಅರ್ಜಿದಾರರು ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದು, ಅವುಗಳನ್ನು ಪರಿಗಣಿಸಿ ಸೂಕ್ತ ಆದೇಶ ಮಾಡಲಾಗುವುದು. ಸಮಸ್ಯೆಗಳು ಉದ್ಭವಿಸುವುದನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

Related Articles

Comments (0)

Leave a Comment