ಶಕ್ತಿ ಯೋಜನೆ; ಸಾರಿಗೆ ನಿಗಮಗಳಿಗೆ ಸರ್ಕಾರ ಪಾವತಿಸಬೇಕಿರುವ ಬಾಕಿ ಹಣದ ವಿವರ ಕೇಳಿದ ಹೈಕೋರ್ಟ್
- by Jagan Ramesh
- February 18, 2026
- 8 Views
ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಸೇವೆ ಕಲ್ಪಿಸುತ್ತಿರುವ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಭಾಗವಾಗಿ ಸಾರಿಗೆ ನಿಗಮಗಳಿಗೆ ಎಷ್ಟು ಹಣವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂಬ ಕುರಿತು ವಿವರ ನೀಡುವಂತೆ ಸಾರಿಗೆ ನಿಗಮಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮೃತಪಟ್ಟ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಸಿಬ್ಬಂದಿಗೆ ತಲಾ 30 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಕೋರಿ ದಾವಣಗೆರೆಯ ತಾಹೀರ್ ಹುಸೇನ್ ಮತ್ತು ರಾಯಚೂರಿನ ಅಜೀಜ್ ಪಾಷಾ ಜಾಗೀರದಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪರ ವಕೀಲರು, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಸಿಬ್ಬಂದಿಗೆ ಪರಿಹಾರ ಪಾವತಿಸಲು ನಿಗಮಗಳ ಬಳಿ ಹಣವಿಲ್ಲ. ಅಲ್ಲದೇ, ಯಾವುದೇ ಸಂಪನ್ಮೂಲವೂ ಇಲ್ಲ. ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ಕರೊನಾ ಸಂದರ್ಭದಲ್ಲಿ ಸರ್ಕಾರ ನೆರವು ನೀಡಿದ್ದರಿಂದ ವೇತನ ಪಾವತಿಸಲು ಸಾಧ್ಯವಾಗಿತ್ತು. ಅಲ್ಲದೇ, ಪರಿಹಾರ ಪಾವತಿ ಸಂಬಂಧ ಸರ್ಕಾರ ಹೊರಡಿಸಿದ್ದ ನಿರ್ಣಯ ಜಾರಿಗೊಳಿಸದಿರಲು ನಿಗಮಗಳು ನಿರ್ಧರಿಸಿವೆ ಎಂದರು.
ಆಗ ನ್ಯಾಯಪೀಠ, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಅಪಾರ ಪ್ರಮಾಣದಲ್ಲಿ ಉಚಿತ ಬಸ್ ಸೇವೆ ನೀಡಲಾಗುತ್ತಿದೆ. ಉಚಿತ ಟಿಕೆಟ್ ನೀಡಲಾಗುತ್ತಿದೆಯಲ್ಲ, ಅದು ಹೇಗೆ ಕೆಲಸ ಮಾಡುತ್ತಿದೆ? ಇದುವರೆಗೆ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ? ಈ ಹಣ ಪಡೆದು ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಪಾವತಿಸಬಹುದಲ್ಲವೇ? ಪರಿಹಾರ ಪಾವತಿಸಲು ಸಂಪನ್ಮೂಲ ಇಲ್ಲ ಎನ್ನುತ್ತಿದ್ದೀರಿ. ರಾಜ್ಯ ಸರ್ಕಾರ ನಿಗಮಗಳಿಗೆ ಎಷ್ಟು ಉಚಿತ ಟಿಕೆಟ್ ಹಣ ಕೊಡಬೇಕು? ಶಕ್ತಿ ಯೋಜನೆಯಡಿ ಸರ್ಕಾರ ಎಷ್ಟು ಬಾಕಿ ಉಳಿಸಿಕೊಂಡಿದೆ? ಅದು ನಿಮ್ಮ ಸಂಪನ್ಮೂಲವೇ ಅಲ್ಲವೇ? ಎಂದು ಪ್ರಶ್ನಿಸಿತು.
ಅಂತಿಮವಾಗಿ ನ್ಯಾಯಪೀಠ, ಶಕ್ತಿ ಯೋಜನೆಯಡಿ ಸರ್ಕಾರ ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ ಮತ್ತು ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಸರ್ಕಾರಿ ಉದ್ಯೋಗಿಗಳಿಗೆ ಪರಿಹಾರ ನೀಡುವ ಕುರಿತಾದ ಯೋಜನೆಯನ್ನು (ಸ್ಕೀಮ್) ನ್ಯಾಯಾಲಯಕ್ಕೆ ದಾಖಲೆಯಲ್ಲಿ ಸಲ್ಲಿಸಬೇಕು. ಏಳು ಕುಟುಂಬಗಳಿಗೆ ಪರಿಹಾರ ನೀಡಿ ಉಳಿದವರಿಗೆ ನೀಡದೇ ತಾರತಮ್ಯ ಮಾಡಲಾಗದು ಎಂದು ತಿಳಿಸಿ, ಅರ್ಜಿ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಕೋವಿಡ್ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ಕೆಲಸ ಮಾಡುವಂತೆ ಬಲವಂತ ಮಾಡಲಾಗಿದೆ. ಈ ಸಂದರ್ಭದಲ್ಲಿ ಮೃತಪಟ್ಟ ಏಳು ಮಂದಿಯ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಈ ಸಂಬಂಧ ನಿರ್ಣಯ ಹೊರಡಿಸಲಾಗಿದೆ. ನಿರ್ಣಯ ಹೊರಡಿಸಿ, ಆನಂತರ ಅದನ್ನು ಹಿಂಪಡೆಯಲಾಗದು. ಕೋವಿಡ್ ಸಂದರ್ಭದಲ್ಲಿ ಶಿಕ್ಷಕರು ಮುಂಚೂಣಿ ಆರೋಗ್ಯ ಕಾರ್ಯಕರ್ತರಾಗಿರಲಿಲ್ಲ. ಆದರೂ, ಅವರಿಗೆ ಯೋಜನೆ ವಿಸ್ತರಿಸಿ, ಪರಿಹಾರ ಪಾವತಿಸಲಾಗಿದೆ. ಆದರೆ, ಸಾರಿಗೆ ನಿಗಮಗಳ ಸಿಬ್ಬಂದಿಗೆ ಪರಿಹಾರ ಪಾವತಿಸಲು ಮೀನಮೇಷ ಎಣಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಪರಿಹಾರ ನೀಡಲು ಹಣವಿಲ್ಲ:
ಸಾರಿಗೆ ನಿಗಮಗಳ ಪರ ವಕೀಲರು, ಕೋವಿಡ್ ಸಂದರ್ಭದಲ್ಲಿ ಸಾರಿಗೆ ನಿಗಮಗಳ ಹಣಕಾಸು ಸ್ಥಿತಿಯು ದಯನೀಯ ಸ್ಥಿತಿ ತಲುಪಿದ್ದು, ಎರಡು ವರ್ಷಗಳ ಕಾಲ ಪರಿಸ್ಥಿತಿ ಚಿಂತಾಜನಕವಾಗಿತ್ತು. ಉದ್ಯೋಗಿಗಳಿಗೆ ವೇತನ ಪಾವತಿಸಲೂ ಸಾಧ್ಯವಾಗಿರಲಿಲ್ಲ. ಪರಿಹಾರ ಪಾವತಿಸಲು ಸಂಪನ್ಮೂಲ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಏಕೆಂದರೆ, ಮೃತಪಟ್ಟವರಿಗೆ ಪರಿಹಾರ ನೀಡಬೇಕು ಎಂದು ನಿರ್ಣಯ ಹೊರಡಿಸಿರುವುದು ಸರ್ಕಾರ. ಇತರ ನಿಗಮಗಳು ಸರ್ಕಾರದ ನಿರ್ಣಯ ಜಾರಿಗೊಳಿಸಿಲ್ಲ. 2020ರ ಡಿಸೆಂಬರ್ 13ರಂದು ಸಚಿವರು ನೀಡಿರುವ ಭರವಸೆ ಇದಾಗಿದೆ. ನಾವು ಯೋಜನೆ ರೂಪಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಮುಂದುವರಿದು, ಕೋವಿಡ್ ಸಂದರ್ಭದಲ್ಲಿ 323 ಮಂದಿ ಮೃತಪಟ್ಟಿದ್ದು, ಪರಿಹಾರ ಪಾವತಿಸಲು ಸಾಧ್ಯವಿಲ್ಲ ಎಂದು ನಿಗಮವು ಸರ್ಕಾರಕ್ಕೆ ಪತ್ರ ಬರೆದಿದೆ. ಕೋವಿಡ್ ವೇಳೆ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರಿಗೆ ಪರಿಹಾರ ನೀಡಿದಂತೆ ಇವರಿಗೆ ನೀಡಲು ನಿಧಿ ನೀಡುವಂತೆ ಕೋರಿದ್ದೇವೆ. ಇದಕ್ಕೆ ರಾಜ್ಯ ಸರ್ಕಾರ ನಿರಾಕರಿಸಿದೆ. ನಿಮ್ಮ ಸಂಪನ್ಮೂಲದಲ್ಲಿ ಅದನ್ನು ಸರಿ ಹೊಂದಿಸಬೇಕು ಎಂದು ಸರ್ಕಾರ ಹೇಳಿದೆ. ಇದನ್ನು ಜಾರಿಗೊಳಿಸಲಾಗದು ಎಂದು ನಿಗಮವು ಮಂಡಳಿಯ ಸಭೆಯಲ್ಲಿ ನಿರ್ಧರಿಸಿದೆ ಎಂದರು.
ಮೃತ 323 ಸಿಬ್ಬಂದಿಯ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪಾವತಿಸಬೇಕು. ಮೂರು ನಿಗಮಗಳು ಇದನ್ನು ಒಪ್ಪಿಕೊಂಡಿಲ್ಲ. ಆನಂತರ, ನಿಗಮದ ಉದ್ಯೋಗಿಗಳು ಬಂದ್ ನಡೆಸಿದ್ದಾರೆ. ಇದು ಕೈಗಾಕರಿಕಾ ವಿವಾದ ಇತ್ಯರ್ಥ ನ್ಯಾಯಾಲಯದಲ್ಲಿ ಬಾಕಿ ಇದೆ. ನಾಲ್ಕು ನಿಗಮಗಳೂ ನಷ್ಟದಲ್ಲಿ ನಡೆಯುತ್ತಿವೆ. ಎರಡು ವರ್ಷದಿಂದ ಬಿಎಂಟಿಸಿ ಉದ್ಯೋಗಿಗಳಿಗೆ ಗ್ರ್ಯಾಚುಟಿ ಹಣ ನೀಡಿಲ್ಲ. ಶಕ್ತಿ ಯೋಜನೆಯಡಿ ಸರ್ಕಾರ ಬಿಡುಗಡೆ ಮಾಡುತ್ತಿರುವ ಹಣವನ್ನು ಗ್ರ್ಯಾಚುಟಿ ಮತ್ತಿತರ ವೆಚ್ಚಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
Related Articles
Thank you for your comment. It is awaiting moderation.


Comments (0)