ಸರ್ಕಾರಿ ನೌಕರನ ಮಕ್ಕಳಿರದ ಪತ್ನಿ ಮರಣ‌ ಹೊಂದಿದ್ದರೆ, ನೌಕರನ ಸಹೋದರ ಅನುಕಂಪದ ನೇಮಕಾತಿಗೆ ಅರ್ಹ – ಹೈಕೋರ್ಟ್

ಬೆಂಗಳೂರು: ಸರ್ಕಾರಿ ನೌಕರ ಮರಣ ಹೊಂದುವ ಮೊದಲೇ ಆತನ ಪತ್ನಿ ಮೃತಪಟ್ಟು, ಆಕೆಗೆ ಮಕ್ಕಳಿಲ್ಲದಿದ್ದರೆ ನೌಕನರ ಸಹೋದರರು ಅನುಕಂಪದ ಆಧಾರದ ಉದ್ಯೋಗ ಪಡೆಯುವ ಹಕ್ಕು ಹೊಂದಿರುತ್ತಾರೆ ಎಂದು ಹೈಕೋರ್ಟ್ ಆದೇಶಿಸಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (ಕೆಕೆಆರ್‌ಟಿಸಿ) ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರೇಶ್ ಮಂಟಪ್ಪ ಲೋಳಸರ (ಮೃತ ನೌಕರ) ತಾಯಿ ಮಂಟವ್ವ ಹಾಗೂ ಸಹೋದರ ಸಂಗಣ್ಣ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?
ಮೃತ ಉದ್ಯೋಗಿಯ ಕುಟುಂಬವನ್ನು ನೋಡಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುವುದು ಹಾಗೂ ಆತನ ಸಾವಿನಿಂದ ಉಂಟಾಗುವ ತುರ್ತು ಪರಿಸ್ಥಿತಿಗಳು ಕುಟುಂಬಕ್ಕೆ ಆರ್ಥಿಕ ಹೊರೆಯಾಗಬಾರದು ಎನ್ನುವುದೇ ಅನುಕಂಪದ ಆಧಾರದ ನೇಮಕಾತಿಯ ಉದ್ದೇಶವಾಗಿದೆ. ಈ ಪ್ರಕರಣದಲ್ಲಿ ವೀರೇಶ್ ಅವರ ಸಂಗಾತಿಯಾದ ಸುನಂದಾ ಅವರು 2022ರ ಏಪ್ರಿಲ್ 9ರಂದು ಪತಿಗೂ ಮೊದಲೇ ನಿಧನರಾಗಿದ್ದರು. ಜತೆಗೆ, ಅನುಕಂಪದ ನೇಮಕಾತಿಯ ಹಕ್ಕು ಮಂಡಿಸಲು ಅವರಿಗೆ ಯಾವುದೇ ಮಕ್ಕಳಿಲ್ಲ ಎಂಬುದು ವಾಸ್ತವ. ಸಂಗಾತಿಯ ಮರಣದ ನಂತರ, ತಾಯಿ ಮಂಟವ್ವ ಹಾಗೂ ಸಹೋದರ ಸಂಗಣ್ಣನ ಜತೆ ವಾಸಿಸುತ್ತಿದ್ದ ವೀರೇಶ್, ಅವರಿಬ್ಬರನ್ನೂ ನೋಡಿಕೊಳ್ಳುತ್ತಿದ್ದರು. ಇದೀಗ, ವೀರೇಶ್ ಮರಣದ ಬಳಿಕ ತಾಯಿಯನ್ನು ನೋಡಿಕೊಳ್ಳುತ್ತಿರುವ ಸಂಗಣ್ಣನಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಒದಗಿಸುವುದು ಸೂಕ್ತವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತಾಯಿಯನ್ನು ನೋಡಿಕೊಳ್ಳಬೇಕು:
ಮೃತ ವೀರೇಶ್ ಸಹೋದರನಾದ ಸಂಗಣ್ಣ (ಎರಡನೇ ಅರ್ಜಿದಾರ) ಮನವಿ ಪರಿಗಣಿಸಿ, ಹನ್ನೆರಡು ವಾರಗಳ ಒಳಗೆ ಅವರ ಅರ್ಹತೆಗೆ ಅನುಗುಣವಾಗಿ ಸೂಕ್ತ ಹುದ್ದೆಗೆ ಅನುಕಂಪದ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಕೆಕೆ‌ಆರ್‌ಟಿಸಿ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಕರಿಗೆ ನಿರ್ದೇಶಿಸಿರುವ ನ್ಯಾಯಪೀಠ, ಒಂದು ವೇಳೆ ಸಂಗಣ್ಣ ಅವರು ತಾಯಿಯನ್ನು (ಮೊದಲನೇ ಅರ್ಜಿದಾರೆ) ಸರಿಯಾಗಿ ನೋಡಿಕೊಳ್ಳದಿದ್ದರೆ, ಈ ಆದೇಶ ರದ್ದು ಕೋರಿ ಅರ್ಜಿ ಸಲ್ಲಿಸಲು ಆಕೆ ಸ್ವಾತಂತ್ರ್ಯ ಹೊಂದಿರಲಿದ್ದಾರೆ ಎಂದು ಆದೇಶಿಸಿದೆ.

ಪ್ರಕರಣವೇನು?
ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರೇಶ್ 2023ರ ಸೆಪ್ಟೆಂಬರ್ 21ರಂದು ಮೃತಪಟ್ಟಿದ್ದರು. ಅವರ ಸಾವಿಗೂ ಮೊದಲೇ ಪತ್ನಿ ಸುನಂದಾ 2022ರ ಏಪ್ರಿಲ್ 9ರಂದು ಮರಣ ಹೊಂದಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ವೀರೇಶ್ ಮರಣದ ಬಳಿಕ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ‌ ತಾಯಿ ಹಾಗೂ ಸಹೋದರ ಸಲ್ಲಿಸಿದ್ದ ಅರ್ಜಿಯನ್ನು ನಿಗಮ 2024ರ ನವೆಂಬರ್ 24ರಂದು ತಿರಸ್ಕರಿಸಿ, ಹಿಂಬರಹ ನೀಡಿತ್ತು. ಇದನ್ನು ಪ್ರಶ್ನಿಸಿ ಮಂಟವ್ವ ಹಾಗೂ ಸಂಗಣ್ಣ ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಗೆ ಆಕ್ಷೇಪಿಸಿದ್ದ ಕೆಕೆಆರ್‌ಟಿಸಿ ಪರ ವಕೀಲರು, ರಸ್ತೆ ಸಾರಿಗೆ ಸಂಸ್ಥೆಯ ನೀತಿಯ ಪ್ರಕಾರ, ಮೃತರು ವಿವಾಹಿತರಾಗಿದ್ದರೆ, ಅವರ ಪತ್ನಿ ಮತ್ತು ಮಕ್ಕಳನ್ನು ಹೊರತುಪಡಿಸಿ ಬೇರೆ ಯಾರಿಗೂ ಅನುಕಂಪದ ಹುದ್ದೆ ನೀಡಲಾಗದು ಎಂದು ವಾದಿಸಿದ್ದರು. ಈ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.

Related Articles

Comments (0)

Leave a Comment