ಖಾಸಗಿ ಶಾಲೆಯಿಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲ – ಹೈಕೋರ್ಟ್

ಬೆಂಗಳೂರು: ಖಾಸಗಿ ಅನುದಾನರಹಿತ ಶಾಲೆಯಲ್ಲಿ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸುವುದು ಸಂವಿಧಾನದ ಪರಿಚ್ಛೇದ 21ರ (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಉಲ್ಲಂಘನೆಯಾಗದು ಎಂದು ಹೈಕೋರ್ಟ್‌ ಆದೇಶಿಸಿದೆ.

ಮಗನಿಗೆ ಎಲ್‌ಕೆಜಿ ಪ್ರವೇಶ ನಿರಾಕರಿಸಿದ್ದ ಬೆಳಗಾವಿಯ ಖಾಸಗಿ ಶಾಲೆಯ ಕ್ರಮ ಪ್ರಶ್ನಿಸಿ ಮುಝಾಮ್ಮಿಲ್‌ ಖಾಜಿ ಸಲ್ಲಿಸಿದ್ದ ಅರ್ಜಿ ಕುರಿತು ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿದಾರರ ಅಪ್ರಾಪ್ತ ಮಗನಿಗೆ ಶಾಲೆ ಪ್ರವೇಶ ನಿರಾಕರಣೆ ಮಾಡಿರುವುದು ಸಂವಿಧಾನದತ್ತವಾದ ಹಕ್ಕುಗಳ ಉಲ್ಲಂಘನೆಯಾಗದು. ಅರ್ಜಿದಾರರು ಬೇರೊಂದು ಶಾಲೆಗೆ ಪ್ರವೇಶಾತಿ ಅರ್ಜಿ ಸಲ್ಲಿಸಿ, ಮಗನಿಗೆ ಪ್ರವೇಶ ಪಡೆದುಕೊಳ್ಳಬಹುದು ಎಂದಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಹೈಕೋರ್ಟ್ ಆದೇಶದಲ್ಲೇನಿದೆ?
ಅರ್ಜಿಯಲ್ಲಿ ಸಂವಿಧಾನದ ಪರಿಚ್ಛೇದ 14 (ಸಮಾನತೆ) ಅನ್ನು ಉಲ್ಲಂಘಿಸುವ ಯಾವುದೇ ತಾರತಮ್ಯ ಅಥವಾ ಅಂತಹುದೇ ಯಾವುದೇ ನಿರ್ದಿಷ್ಟ ಆರೋಪವಿಲ್ಲ. ಸಂವಿಧಾನದ ಪರಿಚ್ಛೇದ 19 (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 21ರ ಅಡಿಯಲ್ಲಿನ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಬಗ್ಗೆಯೂ ಯಾವುದೇ ಆರೋಪವನ್ನೂ ಮಾಡಿಲ್ಲ. ಆದರೂ, ವಿದ್ಯಾರ್ಥಿಗೆ ಪ್ರವೇಶ ನೀಡದಿರುವುದು ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿನ ಹಕ್ಕು ಕಸಿದುಕೊಳ್ಳುತ್ತದೆಂದು ಉಲ್ಲೇಖಿಸಲಾಗಿದೆ. ಮಗುವನ್ನು ಶಾಲೆಗೆ ಸೇರಿಸಿಕೊಂಡರೆ ಮಾತ್ರ, ಆ ಹಕ್ಕುಗಳನ್ನು ಸಂರಕ್ಷಿಸಿದಂತಾಗುತ್ತದೆ ಎನ್ನಲಾಗದು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಇದೇ ವೇಳೆ, ಅರ್ಜಿಯು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂಬ ಪ್ರತಿವಾದಿ ಶಾಲೆಯ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ಭಾರತೀಯ ಸಂವಿಧಾನದ 226ನೇ ವಿಧಿಯಡಿ ನ್ಯಾಯಾಲಯದ ಅಧಿಕಾರ ವಿಸ್ತಾರವಾಗಿದೆ. ಯಾವುದೇ ಪ್ರಾಧಿಕಾರ ಅಥವಾ ಖಾಸಗಿ ಘಟಕವು ದೇಶದ ನಾಗರಿಕನ ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕುಗಳ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮವನ್ನು ತೆಗೆದುಕೊಂಡಾಗ, ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಈ ನ್ಯಾಯಾಲಯವು ಚಲಾಯಿಸಬಹುದು ಎಂದು ಸ್ಪಷ್ಟವಾಗಿ ಹೇಳಿದೆ.

ಪ್ರಕರಣವೇನು?
ಅರ್ಜಿದಾರರು ತಮ್ಮ ಪುತ್ರನ ಎಲ್‌ಕೆಜಿ ಪ್ರವೇಶಕ್ಕಾಗಿ ಸೇಂಟ್ ಪೌಲ್ಸ್ ಹೈಸ್ಕೂಲ್‌ಗೆ ಅರ್ಜಿ ಸಲ್ಲಿಸಿದ್ದರು. ಮೊದಲಿಗೆ, ಮಗು ಆಯ್ಕೆಯಾಗಿದೆ, 2025ರ ಫೆಬ್ರವರಿ 28ರಂದು ಮಧ್ಯಾಹ್ನ 1.30ರಿಂದ 3.30ರ ಒಳಗೆ ಪಾಲಕರೊಂದಿಗೆ ಬಂದು, ಪ್ರಾಂಶುಪಾಲರನ್ನು ಭೇಟಿ ಮಾಡಿ ಸೀಟು ಖಾತ್ರಿಪಡಿಸಿಕೊಳ್ಳಬೇಕೆಂದು ತಿಳಿಸಲಾಗಿತ್ತು. ಆನಂತರ ವೆಬ್‌ಸೈಟ್‌ನಲ್ಲಿ, ಮಗುವಿನ ಅರ್ಜಿಯ ಪರಿಶೀಲನೆ ಬಾಕಿ ಇದೆ ಎಂದು ತಿಳಿಸಲಾಗಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment