ಪತಿ ವಿರುದ್ಧದ ಕ್ರೌರ್ಯ ಪ್ರಕರಣ; ಅಮೆರಿಕ ನಿವಾಸದಿಂದ ವಿಸಿ ಮೂಲಕ ವಿಚಾರಣೆಗೆ ಹಾಜರಾಗಲು ಪತ್ನಿಗೆ ಹೈಕೋರ್ಟ್ ಅನುಮತಿ

ಬೆಂಗಳೂರು: ಕ್ರೌರ್ಯ ಪ್ರಕರಣ ಸಂಬಂಧ ಅಮೆರಿಕದ ನಿವಾಸದಿಂದಲೇ ವಿಡಿಯೋ ಕಾನ್ಫರೆನ್ಸ್‌ (ವಿಸಿ) ಮೂಲಕ ಬೆಂಗಳೂರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ಮುಖ್ಯ ವಿಚಾರಣೆಯಲ್ಲಿ ಹೇಳಿಕೆ ದಾಖಲಿಸಲು ಹಾಗೂ ಪತಿಯನ್ನು ಪಾಟಿ ಸವಾಲಿಗೆ ಗುರಿಪಡಿಸಲು ಮಹಿಳೆಯೊಬ್ಬರಿಗೆ ಹೈಕೋರ್ಟ್‌ ಅನುಮತಿ ನೀಡಿದೆ.

ವಿಡಿಯೊ ಕಾನ್ಫರೆನ್ಸ್‌ ಅಧಿನಿಯಮಗಳು-2020ರ ನಿಯಮ 5.3.1 ಸಡಿಲಿಸಿ ಅಮೆರಿಕದ ಮನೆಯಿಂದಲೇ ವಿಸಿ ಮೂಲಕ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಚಾರಣೆಗೆ ಹಾಜರಾಗಲು ಅನುಮತಿ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್‌ ಮಗದುಮ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶದಲ್ಲೇನಿದೆ?
ಅಮೆರಿಕ ಮತ್ತು ಭಾರತದ ಸಮಯ ವ್ಯತ್ಯಾಸವಿದೆ. ಭಾರತೀಯ ನ್ಯಾಯಾಲಯಗಳು ಹಾಗೂ ಅಮೆರಿಕ ರಾಯಭಾರಿ ಕಚೇರಿಯ ಕಾರ್ಯನಿರ್ವಹಣಾ ಸಮಯ ಹೊಂದಾಣಿಕೆಯಾಗದ ಕಾರಣ ಭಾರತದ ಕೋರ್ಟ್‌ನ ವಿಚಾರಣೆಗೆ ಅಮೆರಿಕ ರಾಯಭಾರಿ/ಕಾನ್ಸುಲೇಟ್‌ ಕಚೇರಿಯ ಮೂಲಕ ಹಾಜರಾಗಲು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಇದರಿಂದ, ರಾಯಭಾರಿ ಕಚೇರಿ ಮೂಲಕವೇ ಕೋರ್ಟ್‌ ಪ್ರಕ್ರಿಯೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಒತ್ತಾಯಿಸುವುದರಿಂದ ಅರ್ಜಿದಾರರಿಗೆ ಅನಗತ್ಯ ತೊಂದರೆ ಉಂಟಾಗಲಿದೆ. ಜತಗೆ, ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯನ್ನು ಹಳಿತಪ್ಪಿಸಲು ಸಹ ಕಾರಣವಾಗುತ್ತದೆ. ಆದ್ದರಿಂದ, ಅರ್ಜಿದಾರರು ಅಮೆರಿಕದ ನಿವಾಸದಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಚಾಣೆರಗೆ ಹಾಜರಾಗಬಹುದು ಎಂದು ತಿಳಿಸಿದೆ.

ವಿಚಾರಣೆಯ ಸಮಯದಲ್ಲಿ ವಿಡಿಯೊ ಕಾನ್ಫರೆನ್ಸ್‌ ಸಂಪರ್ಕ ಕಡಿತಗೊಳಿಸುವುದಿಲ್ಲ ಅಥವಾ ಹಠಾತ್ತನೆ ಕೊನೆಗೊಳಿಸುವುದಿಲ್ಲ ಎಂದು ದೃಢೀಕರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿದಾರೆ ಮುಚ್ಚಳಿಕೆ ನೀಡಬೇಕು. ಅರ್ಜಿದಾರೆಯು ತನ್ನ ಮುಚ್ಚಳಿಕೆಯನ್ನು ಉಲ್ಲಂಘಿಸಿದರೆ ಸಂಪೂರ್ಣ ಸಾಕ್ಷ್ಯವನ್ನು ತಿರಸ್ಕರಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್‌ ಸ್ವಾತಂತ್ರ್ಯ ಹೊಂದಿರುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣವೇನು?
ಅರ್ಜಿದಾರ ಮಹಿಳೆ ತನ್ನ ಪತಿಯ ವಿರುದ್ಧ ಬೆಂಗಳೂರಿನ ವಿವೇಕನಗರ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 498(ಎ) ಮತ್ತು 377 ಅಡಿಯಲ್ಲಿ ಕ್ರೌರ್ಯ ಹಾಗೂ ಅಸ್ವಾಭಾವಿಕ ಸಂಭೋಗಕ್ಕೆ ಬಲವಂತಪಡಿಸಿದ, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66ಎ ಮತ್ತು 67 (ಖಾಸಗಿ ಫೋಟೋಗಳನ್ನು ತೆಗೆದು ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಹಂಚಿಕೆ ಮಾಡಿದ ಅಪರಾಧ) ಆರೋಪ ಸಂಬಂಧ ದೂರು ದಾಖಲಿಸಿದ್ದರು. ಪ್ರಕರಣವು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.

ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ದೂರುದಾರೆ (ಅರ್ಜಿದಾರರು) ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿ, ವಿಡಿಯೋ ಕಾನ್ಫರೆನ್ಸ್‌ ನಿಯಮ 5.3.1ರ ಪ್ರಕಾರ ಭಾರತದ ಹೊರ ಭೂ ಪ್ರದೇಶದಲ್ಲಿ ವಾಸವಿರುವವರು (ವಿದೇಶ) ರಾಯಭಾರಿ ಕಚೇರಿ ಮತ್ತು ಕಾನ್ಸುಲೇಟ್‌ ಕಚೇರಿಯಿಂದ ಮಾತ್ರ ತಮ್ಮ ಸಾಕ್ಷ್ಯವನ್ನು ದಾಖಲಿಸಬೇಕು. ಆದರೆ, ಅಮೆರಿಕ ಮತ್ತು ಭಾರತ ಭೂ ಪ್ರದೇಶದ ಸಮಯದಲ್ಲಿ ವ್ಯತ್ಯಾಸವಿದೆ. ಇದರಿಂದ, ಆ ಕಚೇರಿಗಳ ಸೌಲಭ್ಯ ಪಡೆಯಲು ನನಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ, ವಿಡಿಯೊ ಕಾನ್ಫರೆನ್ಸ್‌ ಅಧಿನಿಯಮಗಳ-2020ರ ನಿಯಮ 5.3.1 ಅನ್ನು ಸಡಿಲಿಸಿ, ಅಮೆರಿಕದ ನಿವಾಸದಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ಮುಖ್ಯ ವಿಚಾರಣೆ ಮತ್ತು ಪಾಟಿ ಸವಾಲಿಗೆ ಹಾಜರಾಗಿ ಹೇಳಿಕೆ ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಿದ್ದರು.

Related Articles

Comments (0)

Leave a Comment