ಹಿಜಾಬ್ ತಂಟೆಗೆ ಬಂದರೆ ಹಿಂದುಗಳನ್ನು ಕತ್ತರಿಸುವುದಾಗಿ ಹೇಳಿಕೆ; ಕಾಂಗ್ರೆಸ್ ಮುಖಂಡನ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by Jagan Ramesh
- February 11, 2026
- 48 Views
ಬೆಂಗಳೂರು: ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದ ಸಂದರ್ಭದಲ್ಲಿ ಹಿಂದುಗಳನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಹೇಳಿಕೆ ನೀಡುವ ಮೂಲಕ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ನ ಕಲಬುರಗಿ ಪೀಠ ನಿರಾಕರಿಸಿದೆ.
ಸೇಡಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತದರ ಸಂಬಂಧ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಮುಕ್ರಂ ಖಾನ್ (ಮೊದಲನೇ ಆರೋಪಿ) ಹಾಗೂ ಆತನಿಗೆ ಆಶ್ರಯ ನೀಡಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪ ಎದುರಿಸುತ್ತಿರುವ ಪುತ್ರ ಡಾ. ಸೋಯಬ್ ಖಾನ್ (ಎರಡನೇ ಆರೋಪಿ) ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಮುಕ್ರಂ ಖಾನ್ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ನ್ಯಾಯಪೀಠ, ಅವರ ವಿರುದ್ಧದ ವಿಚಾರಣಾ ಪ್ರಕ್ರಿಯೆಗಳು ಮುಂದುವರಿಯಲಿದೆ ಎಂದು ಆದೇಶಿಸಿದೆ. ಇದೇ ವೇಳೆ, ಮುಕ್ರಂ ಖಾನ್‌ಗೆ ಆಶ್ರಯ ನೀಡಿದ ಆರೋಪದಲ್ಲಿ ಅವರ ಪುತ್ರ ಡಾ. ಸೋಯಬ್ ಖಾನ್ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿದೆ.
ಹೈಕೋರ್ಟ್ ಆದೇಶವೇನು?
ಪ್ರಕರಣದ ದಾಖಲೆಗಳ ಪ್ರಕಾರ, ಮೊದಲನೇ ಆರೋಪಿಯು 2022ರ ಫೆಬ್ರವರಿ 8ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ಅವಧಿಯಲ್ಲಿ ಸೇಡಂ ನಗರದಲ್ಲಿ ಹಿಜಾಬ್ ಘಟನೆ ಸಂಬಂಧ ಮಾತನಾಡುತ್ತಾ ಹಿಂದುಗಳನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಹೇಳುವ ಮೂಲಕ ಉದ್ದೇಶಪೂರ್ವಕವಾಗಿ ಹಾಗೂ ದುರುದ್ದೇಶಪೂರಿತ ಮನಸ್ಥಿತಿಯಿಂದ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿನ ಆರೋಪಗಳಿಂದ ಸ್ಪಷ್ಟವಾಗಿ ತಿಳಿಯುತ್ತಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸಿ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದ್ದು, ಎಲ್ಲ ಸಾಕ್ಷಿಗಳೂ ಮೊದಲನೇ ಆರೋಪಿ ಎಸಗಿದ ಕೃತ್ಯದ ಬಗ್ಗೆ ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಮುಕ್ರಂ ಖಾನ್ ವಿರುದ್ಧ ಹೊರಿಸಲಾದ ಆರೋಪಗಳಿಗೆ ಸಂಬಂಧಿಸಿದಂತೆ ಆರೋಪ ಪಟ್ಟಿಯಲ್ಲಿ ಮೇಲ್ನೋಟಕ್ಕೆ ಪೂರಕವಾದ ಅಂಶಗಳು ಕಂಡುಬಂದಿವೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಇನ್ನು ದೋಷಾರೋಪ ಪಟ್ಟಿಯಲ್ಲಿ ಎರಡನೇ ಆರೋಪಿಯಾದ ಸೋಯಬ್ ಖಾನ್ ವಿರುದ್ಧದ ಏಕೈಕ ಆರೋಪವೆಂದರೆ, ಘಟನೆಯ ನಂತರ ಅವರ ತಂದೆ (ಮೊದಲ ಆರೋಪಿ) ಹೈದರಾಬಾದ್‌ಗೆ ಪರಾರಿಯಾಗಿದ್ದಾಗ ಅವರಿಗೆ ಆಶ್ರಯ ನೀಡಿದ್ದರು. ಈ ಮೂಲಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗೆ ಸಹಕರಿಸಿದ್ದರು ಎನ್ನಲಾಗಿದೆ. ಆದರೆ, ಈ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಾಗಲಿ ಅಥವಾ ಸಾಕ್ಷಿಗಳ ಹೇಳಿಕೆಗಳಾಗಲಿ ಇಲ್ಲ. ಐಪಿಸಿ ಸೆಕ್ಷನ್ 212 (ಅಪರಾಧಿಗೆ ಆಶ್ರಯ ನೀಡುವುದು) ಅನ್ನು ಅನ್ವಯಿಸಲು, ಮ್ಯಾಜಿಸ್ಟ್ರೇಟ್ ಅವರಿಂದ ಅನುಮತಿ ಪಡೆದ ನಂತರ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸಬೇಕಾಗುತ್ತದೆ. ಇದು ಒಂದು ವಿಭಿನ್ನ ಅಪರಾಧವಾಗಿದ್ದು, ಮುಖ್ಯ ಅಪರಾಧದಲ್ಲಿ ಸಹ-ಆರೋಪಿಯನ್ನು ಸೆಕ್ಷನ್ 212ರ ಅಡಿಯಲ್ಲಿ ಸೇರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ ಎರಡನೇ ಆರೋಪಿಯ ವಿರುದ್ಧ ಸೆಕ್ಷನ್ 212ರ ಅಡಿಯಲ್ಲಿ ಯಾವುದೇ ಮೇಲ್ನೋಟದ ಪ್ರಕರಣ ಕಂಡುಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ, ಅವರ ವಿರುದ್ಧದ ಪ್ರಕರಣ ಮುಂದುವರಿಸುವುದು ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಸೋಯಬ್ ಖಾನ್ ವಿರುದ್ಧದ ಪ್ರಕರಣ ರದ್ದುಪಡಿಸಿ, ಅವರ ತಂದೆ ಮುಕ್ರಂ ಖಾನ್ ವಿರುದ್ಧದ ವಿಚಾರಣಾ ಪ್ರಕ್ರಿಯೆ ಮುಂದುವರಿಸಲು ಅನುಮತಿಸಿದೆ.
ಪ್ರಕರಣವೇನು?
ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧಾರಣೆ ನಿಷೇಧಿಸಿ ಅಂದಿನ ಬಿಜೆಪಿ ಸರ್ಕಾರ ಆದೇಶಿಸಿತ್ತು. ಈ ಮಧ್ಯೆ 2022ರ ಫೆಬ್ರವರಿ 17ರಂದು ಶಂಕರ್ ಎಂಬುವರು ಸೇಡಂ ಪೊಲೀಸ್ ಠಾಣೆಗೆ ದೂರು ನೀಡಿ, ಫೆಬ್ರವರಿ 8ರಂದು ಹಿಜಾಬ್ ವಿಚಾರವಾಗಿ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್ ಅವರು, ಹಿಜಾಬ್ ತಂಟೆಗೆ ಬಂದರೆ ಹಿಂದುಗಳನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಹೇಳಿಕೆ ನೀಡಿದ್ದಾರೆ. ಹಿಂದು ಧಾರ್ಮಿಕ ಮುಖಂಡರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಮೂಲಕ ಎರಡು ಕೋಮಿನ ನಡುವೆ ವೈಷಮ್ಯ ಮೂಡಿಸುವ ಜತೆಗೆ ಕೋಮು ಗಲಭೆ ಸೃಷ್ಟಿಸಿ ಸಮಾಜದ ಶಾಂತಿ ಕದಡುವ ಯತ್ನಾ ಮಾಡಿದ್ದಾರೆ. ಆದ್ದರಿಂದ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.
ದೂರು ಆಧರಿಸಿ ಮುಕ್ರಂ ಖಾನ್ ವಿರುದ್ಧ ಐಪಿಸಿ ಸೆಕ್ಷನ್ 298 (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಹಾಗೂ 295(ಎ) (ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ನಡುವೆ ಮುಕ್ರಂ ಖಾನ್‌ಗೆ ಆಶ್ರಯ ನೀಡಿದ ಆರೋಪದಲ್ಲಿ ಅವರ ಪುತ್ರ ಸೋಯಬ್ ಖಾನ್ ಅವರನ್ನು ಎರಡನೇ ಆರೋಪಿಯನ್ನಾಗಿಸಿ, ಐಪಿಸಿ ಸೆಕ್ಷನ್ 212 (ಅಪರಾಧಿಗೆ ಆಶ್ರಯ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಸೇಡಂನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ.
Related Articles
Thank you for your comment. It is awaiting moderation.


Comments (0)