ವೈದ್ಯಕೀಯ ಅರ್ಹತೆ ಇಲ್ಲದೆ ಕ್ಲಿನಿಕ್ ನಡೆಸುತ್ತಿದ್ದಾತನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ವೈದ್ಯಕೀಯ ಅರ್ಹತೆ ಇಲ್ಲದೆ ಕಾನೂನುಬಾಹಿರವಾಗಿ ಕ್ಲಿನಿಕ್‌ ನಡೆಸುವ ಮೂಲಕ ಜನರಿಗೆ ವಂಚಿಸಿದ ಆರೋಪದಲ್ಲಿ ಚಿತ್ರದುರ್ಗದ ಹಿರಿಯೂರು ತಾಲೂಕಿನ ಜಯನಗರದ ನಯನಾ ಕ್ಲಿನಿಕ್‌ನ ಮಿಲನ್‌ ಮಂಡಲ್‌ ಎಂಬುವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಹಿರಿಯೂರು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಮಿಲನ್ ಮಂಡಲ್ (ಎಂ.ಕೆ. ಮಂಡಲ್) ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ವಂಚನೆಯಲ್ಲದೆ ಮತ್ತೇನು?
ಅರ್ಜಿ ಕುರಿತು ಮಾರ್ಚ್ 13ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಸಂಘದಿಂದ ಸರ್ಟಿಫಿಕೇಟ್‌ ಪಡೆದಿರುವುದಾಗಿ ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಗಾದರೆ, ಅರ್ಜಿದಾರರಿಗೆ ಡಾಕ್ಟರೇಟ್‌ ನೀಡಿದ್ದು ಯಾರು, ಯಾರು ಬೇಕಾದರೂ ವೈದ್ಯರೆಂದು ಕರೆದುಕೊಳ್ಳಬಹುದೇ? ಅರ್ಹತೆ ಇಲ್ಲದೇ ಸಾರ್ವಜನಿಕರಿಗೆ ಫಿಸ್ತುಲಾ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ವಂಚನೆಯಲ್ಲದೇ ಇನ್ನೇನು? ಎಂದು ಅರ್ಜಿದಾರರ ಕಾರ್ಯವೈಖರಿಯನ್ನು ಟೀಕಿಸಿತ್ತಲ್ಲದೆ, ಅರ್ಜಿ ಕುರಿತು ತೀರ್ಪನ್ನು ಕಾಯ್ದಿರಿಸಿತ್ತು.

ಪ್ರಕರಣದ ಹಿನ್ನೆಲೆ:
ಹಿರಿಯೂರು ಟೌನ್ ಪೊಲೀಸ್ ಠಾಣೆಗೆ 2025ರ ನವೆಂಬರ್ 25ರಂದು ವೀರೇಶ ಎಂಬುವರು ದೂರು ನೀಡಿ, ಹುಳಿಯಾರು ರಸ್ತೆಯ ಎಸ್‌ಬಿಐ ಬ್ಯಾಂಕ್‌ ಪಕ್ಕದಲ್ಲಿರುವ ನಯನಾ ಕ್ಲಿನಿಕ್‌ನ ವೈದ್ಯ ಡಾ. ಮಿಲನ್ ಮಂಡಲ್‌ (ಎಂ.ಕೆ. ಮಂಡಲ್) ಯಾವುದೇ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆಯದೇ ಕೆಪಿಎಂಇ ಪ್ರಾಧಿಕಾರದಿಂದ ನೋಂದಣಿಯಾಗದೆ, ವೈದ್ಯಕೀಯ ನಿಪುಣತೆಯಿಲ್ಲದೆ ಆರೋಗ್ಯ ಇಲಾಖೆಯಿಂದ ಪರವಾನಗಿ ಪಡೆಯದೆ ಸಾರ್ವಜನಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. 2021ರ ಜನವರಿ 21ರಂದು ನನ್ನ ತಂದೆಗೆ ಪಿಸ್ತುಲಾ ಕಾಯಿಲೆಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಅದರಿಂದ ಅವರ ಆಂತರಿಕ ಸ್ಪಿಂಕ್ಟರ್ಗೆ ಹಾನಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು. ದೂರು ಆಧರಿಸಿ, ಎಂ.ಕೆ. ಮಂಡಲ್‌ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಇದರಿಂದ, ಪ್ರಕರಣ ರದ್ದು ಕೋರಿ ಮಿಲನ್ ಮಂಡಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment