ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಚಟುವಟಿಕೆಗೆ ನಿರ್ಬಂಧ; ಸರ್ಕಾರದ ಆದೇಶದ ಮೇಲಿನ ತಡೆಯಾಜ್ಞೆ ತೆರವಿಗೆ ಹೈಕೋರ್ಟ್ ನಕಾರ
- by Prashanth Basavapatna
- November 6, 2025
- 3 Views
ಬೆಂಗಳೂರು/ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ 10ಕ್ಕೂ ಅಧಿಕ ಮಂದಿ ಗುಂಪು ಸೇರಿದರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಸಂಬಂಧ ಹೊರಡಿಸಲಾಗಿದ್ದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ.
ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ವಿಭಾಗೀಯ ನ್ಯಾಯಪೀಠ, ಮಧ್ಯಂತರ ಆದೇಶ ತೆರವು ಕೋರಿ ಏಕಸದಸ್ಯ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಮುಕ್ತ ಅವಕಾಶ ಹೊಂದಿದೆ ಎಂದು ತಿಳಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಸೇರಿ ಯಾವುದೇ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2025ರ ಅಕ್ಟೋಬರ್ 18ರಂದು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಧಾರವಾಡದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಅಕ್ಟೋಬರ್ 28ರಂದು ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತು ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.
ಆದೇಶವೇನು?
ಮೇಲ್ಮನವಿದಾರ ರಾಜ್ಯ ಸರ್ಕಾರ ಮಧ್ಯಂತರ ಆದೇಶ ತೆರವಿಗೆ ಕೋರಿ ಏಕಸದಸ್ಯ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಲು ಮುಕ್ತವಾಗಿದೆ. ಒಂದೊಮ್ಮೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದರೆ ಏಕಸದಸ್ಯ ನ್ಯಾಯಪೀಠ ಅದನ್ನು ಪರಿಗಣಿಸಿ, ರಿಟ್ ಅರ್ಜಿಯನ್ನು ಅಂತಿಮವಾಗಿ ಇತ್ಯರ್ಥಪಡಿಸಲಿದೆ ಎಂಬ ಖಾತ್ರಿ ಇದೆ. ಪಕ್ಷಕಾರರ ವಾದಗಳನ್ನು ಮುಕ್ತವಾಗಿರಿಸಲಾಗಿದ್ದು, ಸರ್ಕಾರದ ಮೇಲ್ಮನವಿ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಈ ವೇಳೆ, ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶದ ಅನುಷ್ಠಾನವನ್ನು ಅರ್ಜಿದಾರರಿಗೆ ಮಾತ್ರ ಸೀಮಿತಗೊಳಿಸುವ ಬಗ್ಗೆ ಪರಿಗಣಿಸುವಂತೆ ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ ನ್ಯಾಯಪೀಠ, ಈ ಕುರಿತು ನೀವು ಏಕಸದಸ್ಯ ನ್ಯಾಯಪೀಠದ ಮುಂದೆಯೇ ಮನವಿ ಮಾಡಬಹುದು. ಈ ರೀತಿಯ ಕೆಲ ಪ್ರಕರಣಗಳಲ್ಲಿ ಏಕಸದಸ್ಯ ಪೀಠದ ಆದೇಶವನ್ನು ಕಡೆಗಣಿಸಲಾಗದು ಎಂದು ಹೇಳಿತು.
ಮೇಲ್ಮನವಿ ಸಂಬಂಧ ನವೆಂಬರ್ 4ರಂದು ನಡೆದ ವಿಚಾರಣೆ ವೇಳೆ, ಮಧ್ಯಂತರ ಆದೇಶ ತೆರವಿಗೆ ಕೋರಿ ಏಕಸದಸ್ಯ ನ್ಯಾಯಪೀಠದ ಮುಂದೆ ಮೆಮೊ ಸಲ್ಲಿಸಬಹುದಲ್ಲವೇ? ಎಂದು ವಿಭಾಗೀಯ ನ್ಯಾಯಪೀಠ ಸರ್ಕಾರವನ್ನು ಪ್ರಶ್ನಿಸಿತ್ತು. ಇದಕ್ಕೆ ಎಜಿ ಅವರು, ಏಕಸದಸ್ಯ ನ್ಯಾಯಪೀಠ ಮಧ್ಯಂತರ ಪರಿಹಾರ ನೀಡಬಹುದಿತ್ತು. ಆದರೆ, ತಡೆಯಾಜ್ಞೆ ನೀಡಿದೆ. ಆದ್ದರಿಂದ, ಮುಂದಿನ ನ್ಯಾಯಾಲಯಕ್ಕೆ ಹೋಗಬೇಕೆ ಹೊರತು ಅಲ್ಲಿಗೆ ಹೋಗಲಾಗದು ಎಂದು ವಿವರಿಸಿದ್ದರು. ಸರ್ಕಾರದ ಈ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.
Related Articles
Thank you for your comment. It is awaiting moderation.


Comments (0)