ಲೋಕಸಭೆ ಚುನಾವಣೆ ವೇಳೆ ₹4.8 ಕೋಟಿ ಪತ್ತೆ; ಸಂಸದ ಕೆ. ಸುಧಾಕರ್ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ವೇಳೆ ಮಾದಾವರದ ಬಳಿ 4.8 ಕೋಟಿ ರೂ. ಪತ್ತೆಯಾದ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಸಂಸದ ಕೆ. ಸುಧಾಕರ್‌ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಎಫ್‌ಐಆರ್‌ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಡಾ.ಕೆ. ಸುಧಾಕರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಪ್ರಕರಣವೇನು?
ಲೋಕಸಭೆ ಚುನಾವಣೆ ವೇಳೆ 2024ರ ಏಪ್ರಿಲ್ 25ರಂದು ಮಾದರಿ ನೀತಿ ಸಂಹಿತೆ (ಎಂಸಿಸಿ) ಅಧಿಕಾರಿ ಮೌನಿಶ್‌ ಮುದ್ಗಿಲ್‌ ಅವರ ಮೊಬೈಲ್‌ಗೆ ಒಂದು ಕಡೆ 10 ಕೋಟಿ ರೂ.ಗಳನ್ನು ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಇಡಲಾಗಿದೆ ಎಂಬ ಮಾಹಿತಿ ಬಂದಿತ್ತು. ಅದರಂತೆ, ಮಾದಾವರ ಗ್ರಾಮದ ಗೋವಿಂದಪ್ಪ ಎಂಬುವರ ಮನೆ ಮೇಲೆ ಚುನಾವಣಾಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾಗ 4.8 ಕೋಟಿ ಹಣ ಜಪ್ತಿ ಮಾಡಲಾಗಿತ್ತು ಎಂದು ಸ್ಟ್ಯಾಟಿಕ್‌ ಸರ್ವೇಲೆನ್ಸ್‌ ತಂಡದ ಸದಸ್ಯ ದಶರಥ್‌ ವಿ.ಕುಂಬಾರ್‌ ದೂರು ನೀಡಿದ್ದರು.

ಈ ವೇಳೆ ಅಧಿಕಾರಿ ಮುನೀಶ್‌ ಮೌದ್ಗಿಲ್‌ಗೆ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುಧಾಕರ್‌ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ ಸಹಾಯ ಮಾಡುವಂತೆ ವಾಟ್ಸ್‌ಆ್ಯಪ್‌ ಕರೆ, ಮೆಸೇಜ್‌ ಮಾಡಿದ ಆರೋಪ ಎದುರಾಗಿತ್ತು. ಪತ್ತೆಯಾಗಿದ್ದ ಹಣವನ್ನು ಮತದಾರರಿಗೆ ನೀಡಲು ಮುಂದಾಗಿದ್ದರು ಎಂದು ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ದೂರು ಆಧರಿಸಿ ಪೊಲೀಸರು ಕೆ.ಸುಧಾಕರ್‌, ಗೋವಿಂದಪ್ಪ ಮತ್ತಿತರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 171ಇ, (ಚುನಾವಣೆಯಲ್ಲಿ ಲಂಚ) 171ಎಫ್‌ (ಚುನಾವಣೆಯಲ್ಲಿ ಅನುಚಿತ ಪ್ರಭಾವ ಬೀರಿದ), 171 ಬಿ (ಚುನಾವಣೆಯಲ್ಲಿ ಲಂಚ, ಉಡುಗೊರೆ ನೀಡಿ ಮತದಾರರ ಮೇಲೆ ಪ್ರಭಾವ ಬೀರಿದ), 171ಸಿ (ಮತ ಚಲಾವಣೆ ಹಕ್ಕಿನಲ್ಲಿ ಮಧ್ಯಪ್ರವೇಶ ಮಾಡಿದ) ಮತ್ತು ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್‌ 123ರಡಿ (ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆಸಿದ) ಆರೋಪದ ಮೇಲೆ ಎಫ್‌ಐಆರ್‌ ದಾಖಲು ಮಾಡಿದ್ದರು. ನಂತರ ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿ ವಿಶೇಷ ನ್ಯಾಯಾಲಯ ಆದೇಶಿಸಿತ್ತು.

ಇದರಿಂದ, ತಮ್ಮ ವಿರುದ್ಧ ಎಫ್‌ಐಆರ್‌ ಮತ್ತು ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಸಂಸದ ಕೆ.ಸುಧಾಕರ್‌ ಹೈಕೋರ್ಟ್‌ ಮೊರೆ ಹೋಗಿದ್ದರು.

Related Articles

Comments (0)

Leave a Comment