ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಮಹಿಳೆಯ ಮೇಲೆ ಅತ್ಯಾಚಾರ ಆರೋಪ; ಯುವಕನ ವಿರುದ್ಧದ ಎಫ್‌ಐಆರ್ ರದ್ದು
- by Ramya B T
- October 27, 2025
- 14 Views
ಬೆಂಗಳೂರು: ಪರಸ್ಪರ ಇಚ್ಛೆಯಿಂದ ಹುಟ್ಟಿದ ಸಂಬಂಧವನ್ನು ಅಪರಾಧವಾಗಿ ಪರಿವರ್ತಿಸಲಾಗದು ಎಂದಿರುವ ಹೈಕೋರ್ಟ್, ಡೇಟಿಂಗ್ ಆ್ಯಪ್ ‘ಬಂಬಲ್’ ಮೂಲಕ ಪರಿಚಯವಾದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸಿ ಆದೇಶಿಸಿದೆ.
ಡೇಟಿಂಗ್ ಆ್ಯಪ್ ಮೂಲಕ ಪರಿಚಿತರಾಗಿ, ಆತ್ಮೀಯತೆ ಬೆಳೆಸಿಕೊಂಡ ನಂತರ ಓಯೋ ರೂಮ್‌ನಲ್ಲಿ ಪರಸ್ಪರ ಒಪ್ಪಿಗೆ ಮೇಲೆ ಲೈಂಗಿಕ ಕ್ರಿಯೆ ನಡೆಸಿದ ಯುವಕನ ವಿರುದ್ಧ ಮಹಿಳೆ ನೀಡಿದ್ದ ದೂರು ಆಧರಿಸಿ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಈ ಎಫ್‌ಐಆರ್ ರದ್ದು ಕೋರಿ ಬನ್ನೇರುಘಟ್ಟ ರಸ್ತೆಯ ಅವನಿ ಶೃಂಗೇರಿ ನಗರದ 23 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪರಸ್ಪರ ಇಚ್ಛೆಯಿಂದ ಹುಟ್ಟಿದ ಸಂಬಂಧ, ಅದು ನಿರಾಶೆಯಲ್ಲಿ ಸ್ಥಾಪಿತವಾದರೂ, ಸ್ಪಷ್ಟ ಪ್ರಕರಣಗಳನ್ನು ಹೊರತುಪಡಿಸಿ, ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಅಪರಾಧವಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ಹೇಳಿದ್ದೇನು?
ಪ್ರಕರಣದಲ್ಲಿ ಮಹಿಳೆ ದಾಖಲಿಸಿದ್ದ ದೂರು, ತನಿಖೆ ನಡೆಸಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿ ಮತ್ತು ದೂರುದಾರ ಮಹಿಳೆ ಮತ್ತು ಆರೋಪಿಯ ನಡುವಿನ ಸಂದೇಶದ (ಚಾಟ್) ವಿವರಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಆರೋಪಿ ಮತ್ತು ದೂರುದಾರೆಯ ನಡುವಿನ ಸಂದೇಶಗಳು ಉತ್ತಮ ಅಭಿರುಚಿಯಿಂದ ಕೂಡಿಲ್ಲ. ಅವರ ನಡುವಿನ ಎಲ್ಲ ಕೃತ್ಯಗಳು ಸಮ್ಮತಿಯಿಂದ ಕೂಡಿವೆ ಎಂಬುದನ್ನು ಮಾತ್ರ ಸೂಚಿಸುತ್ತದೆ. ಪ್ರಸ್ತುತ ಅರ್ಜಿದಾರನ ವಿರುದ್ಧ ವಿಚಾರಣೆಗೆ ಅವಕಾಶ ನೀಡಿದರೆ ಕಾನೂನು ಪ್ರಕ್ರಿಯೆ ದುರುಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರ ಯುವಕನ ವಿರುದ್ಧದ ಎಫ್‌ಐಆರ್ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಪ್ರಾಸಿಕ್ಯೂಷನ್ ದಾಖಲೆಗಳ ಪ್ರಕಾರ, ದೂರುದಾರೆ ಮತ್ತು ಅರ್ಜಿದಾರ ಯುವಕ ಡೇಟಿಂಗ್ ಆ್ಯಪ್ ‘ಬಂಬಲ್’ ಮುಖಾಂತರ ಪರಿಚಿತರಾಗಿದ್ದರು. ಹಲವು ವರ್ಷಗಳ ಕಾಲ ಸಂಪರ್ಕದಲ್ಲಿದ್ದ ಅವರು, ಇನ್ಸ್ಟ್ರಾಗ್ರಾಮ್ ಮೂಲಕ ಪೋಟೊ ಹಾಗೂ ಸಂದೇಶಗಳನ್ನು ಪರಸ್ಪರ ವಿನಿಯಮ ಮಾಡಿಕೊಂಡಿದ್ದರು. 2024ರ ಆಗಸ್ಟ್ 11ರಂದು ಭೇಟಿಯಾಗಿದ್ದ ಅವರು, ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡಿ, ಅಲ್ಲಿಂದ ಓಯೋ ಹೋಟೆಲ್‌ಗೆ ತೆರಳಿದ್ದರು. ಅಲ್ಲಿ ದೂರುದಾರೆ ಆರೋಪಿಸಿರುವಂತೆ ಇಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿದೆ. ಮರುದಿನ ಆರೋಪಿಯು ದೂರುದಾರೆಯನ್ನು ಆಕೆಯ ಅಪಾರ್ಟ್‌ಮೆಂಟ್‌ಗೆ ಡ್ರಾಪ್ ಮಾಡಿದ್ದ.
ಅದೇ ದಿನ ದೈಹಿಕ ಅಸ್ವಸ್ಥತೆಗೆ ಗುರಿಯಾದ ದೂರುದಾರೆ, ಖಾಸಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಆಗ ತನ್ನ ಮೇಲೆ ಲೈಂಗಕ ದೌರ್ಜನ್ಯ ನಡೆದಿದೆ ಎಂದು ಆಕೆಗೆ ತಿಳಿದುಬಂದಿದೆ. ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಆಕೆ, ಅರ್ಜಿದಾರನು ಲೈಂಗಿಕ ಸಂಪರ್ಕಕ್ಕೆ ಪುಸಲಾಯಿಸಿದ. ಅದಕ್ಕೆ ನಾನು ನಾನು ಸಮ್ಮತಿ ಸೂಚಿಸಲಿಲ್ಲ. ಅಲ್ಲದೆ, ಆ ಸಂಬಂಧ ಮುದುವರಿಯದಂತೆ ಸೂಚಿಸಿದೆ. ಆದರೂ, ನನ್ನ ಆಕ್ಷೇಪಣೆಯನ್ನು ಮೀರಿ ಸಂಭೋಗ ನಡೆಸಿದ್ದ ಎಂದು ದೂರಿನಲ್ಲಿ ಆರೋಪಿಸಿದ್ದರು.
ಆ ದೂರು ಆಧರಿಸಿದ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 64 ಅಡಿಯಲ್ಲಿ ಅತ್ಯಾಚಾರ ಅಪರಾಧ ಸಂಬಂಧ ಎಫ್‌ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದರು. ಬಳಿಕ ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ, ಎಫ್‌ಐಆರ್ ಹಾಗೂ ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಆರೋಪಿ ಯುವಕ ಹೈಕೋರ್ಟ್ ಮೆಟ್ಟಿಲೇರಿದ್ದ.
ಒಪ್ಪಿತ ಲೈಂಗಿಕ ಕ್ರಿಯೆ; ಆರೋಪಿಯ ವಾದ:
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲ ಆತ್ರೇಯ ಸಿ.ಶೇಖರ್, ಅರ್ಜಿದಾರ ಮತ್ತು ದೂರುದಾರೆ ಡೇಟಿಂಗ್ ಆ್ಯಪ್ ಬಂಬಲ್ ಮೂಲಕ ಪರಿಚಿತರಾಗಿದ್ದರು. ಪೋಟೋ, ವಿಡಿಯೋ ವಿನಿಮಯ ಮಾಡಿಕೊಂಡಿದ್ದು, ಇನ್ಸ್ಟ್ರಾಗ್ರಾಮ್‌ನಲ್ಲಿ ಚಾಟಿಂಗ್ ಮಾಡಿದ್ದಾರೆ. ಆ ಫೊಟೋಗಳಿಂದ ದೂರುದಾರೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು ಎಂಬುದು ದೃಢಪಡುತ್ತದೆ. ಈ ಸಂಗತಿಗಳನ್ನು ತನಿಖಾಧಿಕಾರಿಯು ಉದ್ದೇಶಪೂರ್ವವಾಗಿಯೇ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ ಎಂದು ತಿಳಿಸಿದ್ದರು.
ಆರೋಪಿ ಹಾಗೂ ದೂರುದಾರೆ ವಿನಿಮಯ ಮಾಡಿಕೊಂಡಿದ್ದ ಫೋಟೋ, ವಿಡಿಯೋ ಮತ್ತು ಇನ್ಸ್ಟ್ರಾಗ್ರಾಮ್ ಚಾಟಿಂಗ್ ವಿವರಗಳನ್ನು ಲಗತ್ತಿಸಿ ಮೆಮೋ ಸಲ್ಲಿಸಿದ್ದ ಅರ್ಜಿದಾರನ ಪರ ವಕೀಲರು, ಇಬ್ಬರ ನಡುವಿನ ಲೈಂಗಿಕ ಕ್ರಿಯೆಯು ಸಂಪೂರ್ಣವಾಗಿ ಸಮ್ಮತಿ ಮೇರೆಗೆ ನಡೆದಿದೆ. ಬಂಬಲ್ ಆ್ಯಪ್‌ನಲ್ಲಿ ಅವರು ಸುದೀರ್ಘ ಸಮಯದವರಗೆ ಸಕ್ರಿಯರಾಗಿದ್ದರು. ಆದ್ದರಿಂದ, ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.
ಸರ್ಕಾರದ ವಾದವೇನು?
ಅರ್ಜಿದಾರನ ವಾದವನ್ನು ಅಲ್ಲಗೆಳೆದಿದ್ದ ಸರ್ಕಾರದ ಪರ ವಕೀಲರು, ದೂರುದಾರೆಯ ಮೇಲೆ ಅರ್ಜಿದಾರ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅದನ್ನು ಒಪ್ಪಿತ ಲೈಂಗಿಕ ಕ್ರಿಯೆ ಎಂದು ಪರಿಗಣಿಸಲಾಗದು. ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದು ಸಹ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಅಪರಾಧವಾಗುತ್ತದೆ. ಇದು ಅಂತಹ ಪ್ರಕರಣವಾಗಿರದಿದ್ದರೂ, ಸಮ್ಮತಿಯ ಸಂಭೋಗ ನಡೆದಿದೆಯೇ ಅಥವಾ ಇಲ್ಲವೇ ಎಂಬುದು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ತೀರ್ಮಾನವಾಗಬೇಕಿದೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
Related Articles
Thank you for your comment. It is awaiting moderation.


Comments (0)