ನಾಗರಭಾವಿಯಲ್ಲಿ ಮೆಟ್ರೋ ಮಾರ್ಗದ ರೀ-ಅಲೈನ್ಮೆಂಟ್ ಪ್ರಶ್ನಿಸಿದ್ದ ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್

ಬೆಂಗಳೂರು: ನಾಗರಭಾವಿ ಸಮೀಪ ನಮ್ಮ ಮೆಟ್ರೋ ಆರೆಂಜ್ ಲೈನ್‌ನ ಮಾರ್ಗ ಬದಲಾವಣೆ (ರೀ-ಅಲೈನ್ಮೆಂಟ್) ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.

ಈ ಸಂಬಂಧ ‘ನಾಗರಭಾವಿ ಆಸ್ತಿ ಮಾಲೀಕರು ಮತ್ತು ವಾಣಿಜ್ಯ ಸಂಸ್ಥೆಗಳ ಕಲ್ಯಾಣ ಸಂಘ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಮೆಟ್ರೊ ಮಾರ್ಗದ ಅಲೈನ್‌ಮೆಂಟ್‌ ಪರಿಶೀಲಿಸಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಪರಿಗಣಿಸುವುದು ಸೂಕ್ತವಲ್ಲ. ಅದನ್ನು ನಿರ್ಧರಿಸುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಮೆಟ್ರೊ ಮಾರ್ಗದ ಅಲೈನ್‌ಮೆಂಟ್‌ ಅನ್ನು ನಿರ್ಧರಿಸಲು ಸೇವೆ ಪಡೆಯಲಿರುವ ಪ್ರಯಾಣಿಕರ ಸಂಖ್ಯೆ ಹಾಗೂ ಇತರ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದೆ. ಅದಾಗ್ಯೂ, ನಾಗರಭಾವಿಯಲ್ಲಿ ಮೆಟ್ರೊ ಮಾರ್ಗದ ರೀ-ಅಲೈನ್ಮೆಂಟ್‌ನಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತ ವರದಿ ಲಗತ್ತಿಸಿ ಅರ್ಜಿದಾರರು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್‌) ನಿರ್ದೇಶಿಸಿ, ಅರ್ಜಿ ವಿಲೇವಾರಿ ಮಾಡಿದೆ.

ಮನವಿ ಏನು?
ನಾಗರಭಾವಿ ವೃತ್ತದಿಂದ ವಿನಾಯಕ ಲೇಔಟ್‌, ಪಾಪಿರೆಡ್ಡಿ ಪಾಳ್ಯ ಮತ್ತು ಬಿಡಿಎ ಕಾಂಪ್ಲೆಕ್ಸ್‌ ಮೂಲಕ ನಾಗರಭಾವಿಗೆ ಹೋಗುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಿಂದ, ನಾಗರಭಾವಿಯಲ್ಲಿ ಹಸಿರು ಹೊದಿಕೆಯ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, 600ಕ್ಕೂ ಅಧಿಕ ಮರಗಳನ್ನು ಕತ್ತರಿಸಬೇಕಾಗುತ್ತದೆ. ಜತೆಗೆ, 600ಕ್ಕೂ ಅಧಿಕ ಮನೆಗಳನ್ನು ತೆರವುಗೊಳಿಸಬೇಕಾಗುತ್ತದೆ. ಅದರ ಬದಲು, ಮೂಲ ಯೋಜನೆಯಂತೆ ದ್ವಾರಕಾನಗರ ನಿಲ್ದಾಣದಿಂದ ಚೌಡೇಶ್ವರಿ ನಗರ ನಿಲ್ದಾಣದವರೆಗೆ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೊ ಮಾರ್ಗ ನಿರ್ಮಿಸಲು ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್‌ಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Related Articles

Comments (0)

Leave a Comment