ವಾರ್ಡ್ ಹೆಸರು ಮರುನಾಮಕರಣಕ್ಕೆ ಕೋರಿದ್ದ ಪಿಐಎಲ್ ವಜಾ; ಅರ್ಜಿದಾರರಿಗೆ 5 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್
- by Ramya B T
- February 11, 2026
- 43 Views
ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಬೀರೇಶ್ವರನಗರ ವಾರ್ಡ್ನ (ವಾರ್ಡ್ ಸಂಖ್ಯೆ 43) ಹೆಸರನ್ನು ಚುಂಚಘಟ್ಟ ವಾರ್ಡ್ ಎಂದು ಮರುನಾಮಕರಣ ಮಾಡಲು ಕೋರಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 5 ಸಾವಿರ ರೂ. ದಂಡ ವಿಧಿಸಿದೆ.
ನಗರದ ಕೋಣನಕುಂಟೆಯ ರೇಣುಕಾ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಹಾಗೂ ಇತರ 20 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿತು. ಜತೆಗೆ, ದಂಡದ ಮೊತ್ತವನ್ನು 2 ವಾರಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್ಎಲ್ಎಸ್ಎ) ಪಾವತಿಸಬೇಕು ಎಂದು ಅರ್ಜಿದಾರರಿಗೆ ನಿರ್ದೇಶಿಸಿತು
ವಿಚಾರಣೆ ವೇಳೆ ನ್ಯಾಯಪೀಠ, ಹೆಸರು ಬದಲಿಸಿರುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿದೆ? ಎಷ್ಟು ದಂಡ ಪಾವತಿಸುತ್ತೀರಿ ಹೇಳಿ? ಇದಕ್ಕಾಗಿ ನ್ಯಾಯಾಂಗದ ಸಮಯವನ್ನೇಕೆ ವ್ಯರ್ಥ ಮಾಡುತ್ತೀರಿ? ಎಂದು ಕೇಳಿತು.
ಅರ್ಜಿದಾರರ ಪರ ವಕೀಲರು, ಎಲ್ಲ ಕಂದಾಯ ದಾಖಲೆಗಳಲ್ಲಿ ಚುಂಚಘಟ್ಟ ಎಂದೇ ಇದೆ. ಇದನ್ನು ಈಗ ಬದಲಿಸಲಾಗುತ್ತಿದೆ ಎಂದರು. ಇದನ್ನು ಒಪ್ಪದ ನ್ಯಾಯಪೀಠ, ನಿರ್ದಿಷ್ಟ ವಾರ್ಡ್ಗೆ ಹೆಸರು ಇಡುವುದಕ್ಕೆ ಸಂಬಂಧಿಸಿದಂತೆ ಯಾರು ಯಾವುದೇ ಅಭಿಪ್ರಾಯ ಹೊಂದಬಹುದು. ಇದಕ್ಕಾಗಿ ನ್ಯಾಯಾಂಗ ಸಮಯ ಪೋಲು ಮಾಡಲಾಗದು ಎಂದು ತಿಳಿಸಿದಲ್ಲದೆ, ಅರ್ಜಿದಾರರಿಗೆ 5 ಸಾವಿರ ರೂ. ದಂಡ ವಿಧಿಸಿ ಪಿಐಎಲ್ ವಜಾಗೊಳಿಸಿತು.
ಅರ್ಜಿದಾರರ ಮನವಿ ಏನು?
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವಾರ್ಡ್ಗಳನ್ನು ಗುರುತಿಸುವಾಗ ಐತಿಹಾಸಿಕ ಪ್ರಸಿದ್ಧವಾದ ಚುಂಚಘಟ್ಟ ಪ್ರದೇಶವನ್ನು 150 ಜನ ವಸತಿ ಹೊಂದಿರುವ ಬೀರೇಶ್ವರ ನಗರಕ್ಕೆ ಸೇರಿಸಿ, ವಾರ್ಡ್ಗೆ ಅದೇ ಹೆಸರು ಮುಂದುವರಿಸುತ್ತಿದೆ. ಇದರಿಂದ, ಚುಂಚಘಟ್ಟದ ಐತಿಹಾಸಿಕ ಹಿನ್ನೆಲೆಗೆ ಹಾನಿಯಾಗುತ್ತಿದೆ. ಆದ್ದರಿಂದ, ಬೀರೇಶ್ವರ ನಗರ ವಾರ್ಡ್ಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ (ಜಿಬಿಎ) ಅಧೀನ ಕಾರ್ಯದರ್ಶಿ 2025ರ ನವೆಂಬರ್ 19ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಿ, ಅದನ್ನು ಚುಂಚಘಟ್ಟ ವಾರ್ಡ್ ಎಂದು ಮರು ನಾಮಕರಣ ಮಾಡಲು ಹಾಗೂ ಇನ್ನು ಮುಂದೆ ವಾರ್ಡ್ ಸಂಖ್ಯೆ 43 ಬೀರೇಶ್ವರ ನಗರ ಬದಲಿಗೆ ಚುಂಚಘಟ್ಟ ಎಂದು ಚಾಲ್ತಿಯಲ್ಲಿರಲಿದೆ ಎಂದು ಘೋಷಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
Related Articles
Thank you for your comment. It is awaiting moderation.


Comments (0)