ಸ್ವಯಂ ರೂಪಿಸಿದ ಮಸೂದೆ ಜಾರಿಗೆ ಕೋರಿದ್ದ ವ್ಯಕ್ತಿಯೊಬ್ಬರ ಪಿಐಎಲ್ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು: ನಗರದ ವ್ಯಕ್ತಿಯೊಬ್ಬರು ತಾವು ರೂಪಿಸಿರುವ ‘ಕರ್ನಾಟಕ ಸರ್ಕಾರ ಸುಧಾರಣಾ ಮಸೂದೆ’ಯನ್ನು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿರುವ ಹೈಕೋರ್ಟ್, ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಅರ್ಜಿದಾರರಿಗೆ ಒಂದು ಲಕ್ಷ ರೂ. ದಂಡ ವಿಧಿಸಿದೆ.

‘ಕರ್ನಾಟಕ ಸರ್ಕಾರ ಸುಧಾರಣಾ ಮಸೂದೆ-2025’ ಜಾರಿಗೆ ತರುವ ಬಗ್ಗೆ ಚರ್ಚಿಸಲು ಎಲ್ಲ 34 ಸಚಿವಾಲಯಗಳು, 44 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕು. ಮಸೂದೆಯ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವಂತೆ ಸಿಎಂ ಅವರ ಪ್ರಧಾನ ಕಾರ್ಯದರ್ಶಿಗೆ ಸೂಚಿಸಬೇಕು ಹಾಗೂ ಈ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸಲು ತಮ್ಮ ಪಕ್ಷದ ಶಾಸಕರು ಮತ್ತು ಸಂಸದರಿಗೆ ಸೂಚಿಸಲು ಕೆಪಿಸಿಸಿ ಅಧ್ಯಕ್ಷರಿಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಮುರಳಿಕೃಷ್ಣ ಬೃಹ್ಮಾನಂದಂ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ರೀತಿಯ ಮನವಿಗಳನ್ನೊಳಗೊಂಡಿರುವ ಅರ್ಜಿಯು ತಪ್ಪು ಗ್ರಹಿಕೆಯಿಂದ ಕೂಡಿದೆ. ಅರ್ಜಿಯು ಯಾವುದೇ ಮೂಲಭೂತ/ಶಾಸನಬದ್ಧ ಹಕ್ಕಿನ ಉಲ್ಲಂಘನೆಗೆ ಸಂಬಂಧಿಸಿದ್ದಲ್ಲ. ಅರ್ಜಿದಾರರು ಎಷ್ಟೇ ಚಾಣಾಕ್ಷರಾದರೂ ಅವರ ಆಲೋಚನೆಗಳನ್ನು (ಐಡಿಯಾ) ನೀಡುವ ವೇದಿಕೆ ಪಿಐಎಲ್‌ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ, 1 ಲಕ್ಷ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸಲಾಗಿದೆ ಎಂದು ಆದೇಶಿಸಿತು.

ಈ ವೇಳೆ, ದಂಡ ವಿಧಿಸದಂತೆ ಅರ್ಜಿದಾರರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತತ್ವವಾಗಿದೆ. ಪ್ರಕರಣಕ್ಕೆ ಮೌಲ್ಯ ತರದಿದ್ದರೆ ಅದು ಸಾರ್ವಜನಿಕ ಹಿತಾಸಕ್ತಿಯಾಗುವುದಿಲ್ಲ. ಇಂಥ ಅರ್ಜಿಗಳಿಗೆ ಸಮಯ ವ್ಯರ್ಥವಾಗಿರುವುದರಿಂದ ಇತರ ದಾವೆದಾರರು ಕಾಯುವಂತಾಗಿದೆ. ನ್ಯಾಯಾಂಗವು ಸರ್ಕಾರದ ಭಾಗ ಎಂಬ ನಿಮ್ಮ ಮಾತು ಮೂಲಭೂತವಾಗಿ ದೋಷಪೂರಿತವಾಗಿದೆ. ದಯಮಾಡಿ ಸಂವಿಧಾನ ಓದಿ, ಮೊದಲ 12 ವಿಧಿಗಳು ಏನೆಂದು ಹೇಳುತ್ತವೆ ಎಂಬುದನ್ನು ಗಮನಿಸಿ ಎಂದು ಮೌಖಿಕವಾಗಿ ನುಡಿಯಿತು.

ನ್ಯಾಯಾಂಗ ಸರ್ಕಾರದ ಭಾಗವಲ್ಲ:
ಇದಕ್ಕೂ ಮುನ್ನ ವಾದ ಮಂಡಿಸಿದ ಅರ್ಜಿದಾರ ಮುರಳಿಕೃಷ್ಣ, ಕರ್ನಾಟಕ ಹೈಕೋರ್ಟ್‌ಗೆ ನಾನು ಸಲ್ಲಿಸುತ್ತಿರುವ ಮೊದಲ ಮತ್ತು ಕೊನೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ. ಕರ್ನಾಟಕ ಸರ್ಕಾರ ಸುಧಾರಣಾ ಮಸೂದೆಯನ್ನು ನಾನು ರೂಪಿಸಿದ್ದೇನೆ. ಅಧಿವೇಶನದಲ್ಲಿ ಈ ಮಸೂದೆಯನ್ನು ಚರ್ಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರುತ್ತಿದ್ದೇನೆ. ಏಕೆಂದರೆ, ನ್ಯಾಯಾಂಗವು ಸರ್ಕಾರದ ಭಾಗವಲ್ಲವೇ? ಎಂದರು.

ಇದನ್ನು ಆಲಿಸಿದ ನ್ಯಾಯಪೀಠ, ನಿಮ್ಮ ಕೋರಿಕೆಯು ಪಿಐಎಲ್‌ ವ್ಯಾಪ್ತಿಗೆ ಬರುವುದಿಲ್ಲ. ನೀವು ರೂಪಿಸಿರುವ ಮಸೂದೆ ಜಾರಿಗೊಳಿಸಬೇಕು ಎಂದು ಕೇಳುತ್ತಿದ್ದೀರಾ? ನ್ಯಾಯಾಂಗವು ಸರ್ಕಾರದ ಭಾಗವಲ್ಲ. ಸಂವಿಧಾನದಲ್ಲಿ ನ್ಯಾಯಾಂಗ ರಾಜ್ಯವಲ್ಲ. ನಿಮ್ಮ ಅರ್ಜಿಯು ತಪ್ಪು ಗ್ರಹಿಕೆಯಿಂದ ಕೂಡಿದೆ. ಅದಕ್ಕಾಗಿಯೇ ದಂಡ ವಿಧಿಸುತ್ತೇವೆ ಎಂದು ಹೇಳಿತು.

Related Articles

Comments (0)

Leave a Comment