ಕೈದಿಗಳಿಗೆ ಪರೋಲ್ ಮಂಜೂರಾತಿ ಪ್ರಕ್ರಿಯೆ ಡಿಜಿಟಲೀಕರಣಕ್ಕೆ ಹೈಕೋರ್ಟ್ ನಿರ್ದೇಶನ
- by Jagan Ramesh
- October 18, 2025
- 4 Views

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಪರೋಲ್ ನೀಡುವ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿರುವ ಹೈಕೋರ್ಟ್, ಹಾಲಿ (ಭೌತಿಕವಾಗಿ ಪರೋಲ್ ಅರ್ಜಿ ಸಲ್ಲಿಸುವ) ಪ್ರಕ್ರಿಯೆ ಬದಲಿಗೆ ಇಡೀ ಪ್ರಕ್ರಿಯೆಯನ್ನು ಆನ್‌ಲೈನ್ ವ್ಯವಸ್ಥೆಗೆ ಪರಿವರ್ತಿಸುವ ಬಗ್ಗೆ 4 ವಾರಗಳಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಮಾಹಿತಿ ತಂತ್ರಜ್ಞಾನ ವಿಭಾಗದ ಡಿಜಿಪಿಗೆ ನಿರ್ದೇಶಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಅಪರಾಧಿಯ ತಾಯಿ ತನ್ನ ಮನೆ ದುರಸ್ತಿ ಕಾರ್ಯದ ಸಹಾಯಕ್ಕೆ ಮಗನಿಗೆ 30 ದಿನ ಪರೋಲ್ ಮಂಜೂರು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹಾಲಿ ಇರುವ ವ್ಯವಸ್ಥೆಯಲ್ಲಿ ಯಾವುದೇ ಅಪರಾಧಿಗೆ ಪರೋಲ್ ಬೇಕಾದರೆ ಭೌತಿಕವಾಗಿ ಅರ್ಜಿ ಸಲ್ಲಿಸಿ, ಆ ಅರ್ಜಿಯನ್ನು ಅನುಸರಣೆ (Follow up) ಮಾಡಬೇಕಾಗಿದೆ. ಆದರೆ, ಆಧುನಿಕ ಯುಗದಲ್ಲಿ ಇನ್ನೂ ಅದೇ ಪದ್ದತಿ ಮುಂದುವರಿಸುವುದು ಸಮಂಜಸವಲ್ಲ. ಆದ್ದರಿಂದ, ಇನ್ನು ಮುಂದೆ ಪರೋಲ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಹೈಕೋರ್ಟ್ ನಿರ್ದೇಶನಗಳೇನು?
• ಪರೋಲ್ ಸ್ಥಿತಿಗತಿ ವಿವರ ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡಬೇಕು. ಅಪರಾಧಿಗಳಿಗೆ ಪರೋಲ್ ಮಂಜೂರು ಮಾಡಿದಾಗ ಸಂತ್ರಸ್ತರಿಗೆ ಆಗುವ ತೊಂದರೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಜತೆಗೆ, ಪರೋಲ್ ನೀಡಿದರೆ ಅಪರಾಧಿಗೆ ಇರುವ ಅಪಾಯಗಳ ಬಗ್ಗೆಯೂ ಪೊಲೀಸರಿಂದ ವರದಿ ಪಡೆಯಬೇಕು.
• ಇಡೀ ಪರೋಲ್ ಪ್ರಕ್ರಿಯೆನ್ನು ಆನ್‌ಲೈನ್ ವ್ಯವಸ್ಥೆಗೆ ಪರಿವರ್ತಿಸಬೇಕಾದ ಅವಶ್ಯಕತೆ ಇದೆ. ಆದ್ದರಿಂದ, ಮಾಹಿತಿ ತಂತ್ರಜ್ಞಾನ ವಿಭಾಗದ ಡಿಜಿಪಿ ಈ ಕುರಿತು ವಿಸ್ತತ ಯೋಜನಾ ವರದಿ ಸಲ್ಲಿಸಬೇಕು. ವರದಿ ಸಿದ್ದಪಡಿಸುವಾಗ ಡಿಜಿಪಿ ಅವರು, 2021ರ ಪರೋಲ್ ನಿಯಮಾವಳಿಯಲ್ಲಿರುವ ಕೆಲ ದೋಷಗಳನ್ನು ಸರಿಪಡಿಸಬೇಕಿದೆ.
• ಪರೋಲ್ ನೀಡುವ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಜೈಲು ಸೇವೆಗಳ ಮಹಾನಿರ್ದೇಶಕರ ವೆಬ್‌ಸೈಟ್‌ನಲ್ಲಿ ಡ್ಯಾಶ್‌ಬೋರ್ಡ್ ಸಿದ್ದಪಡಿಸಬೇಕು.
• ಪೆರೋಲ್‌ಗೆ ಸಂಬಂಧಿಸಿದ ಎಲ್ಲ ವಿವರಗಳು, ಸಲ್ಲಿಸಿದ ಅರ್ಜಿಗಳ ಸಂಖ್ಯೆ, ಪರೋಲ್ ಮಂಜೂರು ಮಾಡಲಾಗಿದೆಯೇ, ಇಲ್ಲವೇ ಎಂಬ ಮಾಹಿತಿ, ಪರೋಲ್ ಅವಧಿಯ ಮಾಹಿತಿ, ಅರ್ಜಿ ತಿರಸ್ಕರಿಸಲಾಗಿದೆಯೇ, ಇಲ್ಲವೇ ಎಂಬ ಮಾಹಿತಿ, ಒಂದು ವೇಳೆ ಅರ್ಜಿ ತಿರಸ್ಕೃತಗೊಂಡಿದ್ದರೆ ಅದಕ್ಕೆ ಕಾರಣಗಳು ಮತ್ತಿತರ ವಿವರಗಳನ್ನು ಡ್ಯಾಶ್‌ಬೋರ್ಡ್‌ನಲ್ಲಿ ಒದಗಿಸಬೇಕು.
ಅತ್ಯಾಚಾರ ಅಪರಾಧಿಗೆ ಪರೋಲ್ ಮಂಜೂರು:
ಇನ್ನು ಅರ್ಜಿದಾರ ಮಹಿಳೆ ಸಲ್ಲಿಸಿದ್ದ ಪರೋಲ್ ಮನವಿಯನ್ನು ಮಾನ್ಯ ಮಾಡಿ ಆಕೆಯ ಮಗನಿಗೆ ಪರೋಲ್ ಮಂಜೂರು ಮಾಡಿರುವ ನ್ಯಾಯಾಲಯ, ಕರ್ನಾಟಕ ಕೈದಿಗಳು ಮತ್ತು ತಿದ್ದುಪಡಿ ಸೇವಾ ಕೈಪಿಡಿ-2021ರ ನಿಯಮ 638ರ ಅಡಿಯಲ್ಲಿ, ಪರೋಲ್ ರಜೆಗಾಗಿ ಅಪರಾಧಿಯಿಂದ ಅರ್ಜಿ ಸ್ವೀಕರಿಸಿದ ನಂತರ, ಸಂಬಂಧಪಟ್ಟ ಮುಖ್ಯ ಸೂಪರಿಂಟೆಂಡೆಂಟ್/ಜೈಲುಗಳ ಸೂಪರಿಂಟೆಂಡೆಂಟ್ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಲಾದ ವಾಸಸ್ಥಳದ ಬಗ್ಗೆ ಪೊಲೀಸ್ ಆಯುಕ್ತರು/ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳಿಂದ ಅನುಮತಿ ವರದಿ ಪಡೆಯಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ನಿಯಮ 638(ಐಐ)(ಬಿ) ಪ್ರಕಾರ ಪಡೆಯಬೇಕಾದ ವರದಿಯ ಸ್ವರೂಪ ಮತ್ತು ಪರಿಗಣಿಸಬೇಕಾದ ಸಮಸ್ಯೆಗಳನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ನ್ಯಾಯಾಲಯದ ಅಭಿಪ್ರಾಯದಂತೆ, ಅಪರಾಧದ ಸ್ವರೂಪ ಮತ್ತು ವಿಧಿಸಲಾದ ಶಿಕ್ಷೆಯನ್ನು ಅವಲಂಬಿಸಿ ಪ್ರತಿಯೊಂದು ಅರ್ಜಿಯಲ್ಲಿ ಪ್ರಕರಣದಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯ ಸೂಪರಿಂಟೆಂಡೆಂಟ್/ ಜೈಲುಗಳ ಅಧೀಕ್ಷ ಕರು ಕೆಲ ಮಾಹಿತಿಯನ್ನು ಸ್ಪಷ್ಟವಾಗಿ ಹುಡುಕುವುದು ಅಥವಾ ವರದಿ ಮಾಡುವುದು ಕಡ್ಡಾಯವಾಗಿದೆ ಎಂದು ಹೈಕೋರ್ಟ್ ಹೇಳಿದೆ.
Related Articles
Thank you for your comment. It is awaiting moderation.
Comments (0)