ನ್ಯಾಯಾಲಯದ ಅನುಮತಿ ಇಲ್ಲದೇ ಹೊಸ ಸಂಘದ ನೋಂದಣಿ ಅರ್ಜಿ ಪರಿಗಣಿಸದಂತೆ ಕೆಎಸ್‌ಬಿಸಿಗೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: ನ್ಯಾಯಾಲಯದ ಅನುಮತಿ ಇಲ್ಲದೆಯೇ ಹೊಸ ಸಂಘ ನೋಂದಣಿಗೆ ಅಥವಾ ಸಂಯೋಜನೆಗೆ ಕೋರಿ ಸಲ್ಲಿಕೆಯಾಗಿರುವ ಅಥವಾ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸದಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್‌‌ಗೆ (ಕೆಎಸ್‌ಬಿಸಿ) ಹೈಕೋರ್ಟ್‌ ನಿರ್ದೇಶಿಸಿದೆ.

‘ಹೈಕೋರ್ಟ್‌ ಬಾರ್‌ ಅಸೋಸಿಯೇಷನ್’ ಎಂಬ ಹೆಸರಿನಡಿ ಬೆಂಗಳೂರು ವಕೀಲರ ಸಂಘದ (ಎಎಬಿ) ಮಾಜಿ ಪದಾಧಿಕಾರಿಗಳು ಹೊಸ ಸಂಘ ನೋಂದಣಿ ಕೋರಿ ಕೆಎಸ್‌ಬಿಸಿಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹೊಸದಾಗಿ ಯಾವುದೇ ಸಂಘ ನೋಂದಣಿಗೆ ಅನುಮತಿ ನೀಡದಂತೆ ಕೆಎಸ್‌ಬಿಸಿಗೆ ನಿರ್ದೇಶಿಸುವಂತೆ ಕೋರಿ ಎಎಬಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ ಪ್ರಸಾದ್‌ ಅವರ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ವಕೀಲರ ಕಲ್ಯಾಣ ನಿಧಿ ಕಾಯ್ದೆ ಸೆಕ್ಷನ್‌ 13ರ ಅಡಿ ಹೊಸ ಸಂಘದ ನೋಂದಣಿಗೆ ಸಂಬಂಧಿಸಿ ಕೆಎಸ್‌ಬಿಸಿಗೆ ಯಾವುದೇ ಅರ್ಜಿ ಸಲ್ಲಿಕೆಯಾದರೂ ನ್ಯಾಯಾಲಯದ ಅನುಮತಿ ಇಲ್ಲದೇ ನೋಂದಣಿ ಅಥವಾ ಅಂಗಸಂಸ್ಥೆಯಾಗಿ ಸಂಯೋಜನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವಂತಿಲ್ಲ. ಕೆಎಸ್‌ಬಿಸಿ ಹಾಲಿ ಅಧ್ಯಕ್ಷರು ನಾಮನಿರ್ದೇಶಿತರಾಗಿದ್ದು, ನೀತಿಯ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿತು.

ಎಎಬಿ ಆಕ್ಷೇಪವೇನು?
ಇದಕ್ಕೂ ಮುನ್ನ, ಎಎಬಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ಅವರು, ವಕೀಲರ ಕಲ್ಯಾಣ ನಿಧಿ ಕಾಯ್ದೆ-1983ರ ಸೆಕ್ಷನ್‌ 13ರ ಅಡಿ ಬೆಂಗಳೂರು ವಕೀಲರ ಸಂಘ ನೋಂದಣಿಯಾಗಿದೆ. ಕೇಂದ್ರದ ಕಾಯ್ದೆ 1987ರ ಅಡಿಯೂ ಮಾನ್ಯತೆ ದೊರೆತಿದೆ. ಈಗ ಹೊಸದಾಗಿ ಸಂಘ ರಚನೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿದರೆ ಅದು ಮತ್ತೆ ಸಮಸ್ಯೆಯಾಗಲಿದೆ. ಕೆಎಸ್‌ಬಿಸಿಗೆ ಚುನಾವಣೆ ನಡೆಯದಿರುವುದರಿಂದ ಈ ಸಮಸ್ಯೆಗಳು ಬರುತ್ತಿವೆ. ಎಎಬಿಯು 21 ಸಾವಿರ ಸದಸ್ಯರನ್ನು ಹೊಂದಿದೆ. ಹೊಸ ಸಂಘಕ್ಕೆ ಅನುಮತಿಸದಂತೆ ಕೆಎಸ್‌ಬಿಸಿಗೆ ನಿರ್ದೇಶಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಅದಕ್ಕೆ‌ ನ್ಯಾಯಪೀಠ, ಕೆಎಸ್‌ಬಿಸಿಯು ಹೊಸ ಸಂಘಗಳ ನೋಂದಣಿಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆಯೇ? ಎಂದು ಪ್ರಶ್ನಿಸಿತು.

ಎಎಬಿ ಪರವಾಗಿ ಫಣೀಂದ್ರ ಅವರ ವಾದ ವಿಸ್ತರಿಸಿದ ಮತ್ತೋರ್ವ ಹಿರಿಯ ವಕೀಲ ಡಿ.ಆರ್‌. ರವಿಶಂಕರ್ ಅವರು, ವಕೀಲರ ಕಲ್ಯಾಣ ನಿಧಿ ಕಾಯ್ದೆಯು ನೋಂದಾಯಿತ ವಕೀಲರ ಸಂಘಗಳಿಗೆ ಅನ್ವಯಿಸುತ್ತದೆ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಕೆಎಸ್‌ಬಿಸಿ ನೋಂದಣಿಗೆ ಮುಂದಾಗುತ್ತಿದೆ. ಹೊಸ ಸಂಘಕ್ಕೆ ಅನುಮತಿ ನೀಡುವ ವಿಚಾರವನ್ನು ಕೆಎಸ್‌ಬಿಸಿಯು ಮುಂದೆ ಬಂದು ಹೇಳಬೇಕು. ಆಗ ಹೊಸ ಸಂಘಕ್ಕೆ ಕೋರುತ್ತಿರುವವರನ್ನು ಪಕ್ಷಕಾರರನ್ನಾಗಿ ಮಾಡಲಾಗುವುದು. ಕೆಎಸ್‌ಬಿಸಿ ಒಡೆದು ಆಳುವ ಕೆಲಸ ಮಾಡುತ್ತಿದೆ. ನಮ್ಮವರೇ ಕೆಲ ವಕೀಲರು ನಮ್ಮ ಎದುರು ನಿಂತಾಗ ನಮಗೆ ನೋವಾಗುತ್ತದೆ. ಎಎಬಿಯಲ್ಲಿ ಅಧ್ಯಕ್ಷರಾಗಿದ್ದವರು ಮತ್ತು ಚುನಾವಣೆಯಲ್ಲಿ ಸೋತವರು ಸೇರಿ ಹೊಸ ಸಂಘ ರಚನೆಗೆ ಮುಂದಾಗಿದ್ದಾರೆ ಎಂದು ವಿವರಿಸಿದರು.

ವಿಚಾರಣೆ ವೇಳೆ ಹಾಜರಿದ್ದ ಮತ್ತೋರ್ವ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು, ರಾಜ್ಯ ವಕೀಲರ ಪರಿಷತ್‌ನಲ್ಲಿ ಚುನಾಯಿತರು ಇಲ್ಲ. ನಾಮನಿರ್ದೇಶಿತ ಅಧ್ಯಕ್ಷರು ನಿರ್ಧಾರ ಕೈಗೊಳ್ಳಲಾಗದು ಎಂದು ತಿಳಿಸಿದರು.

ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಿಗೆ ತುರ್ತು ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಆಗಸ್ಟ್‌ 30ಕ್ಕೆ ಮುಂದೂಡಿತು.

ಸಹಕಾರ ಸಂಘಗಳ ಉಪನಿಬಂಧಕರಿಂದ ಯಥಾಸ್ಥಿತಿಗೆ ಆದೇಶ:
ಮತ್ತೊಂದೆಡೆ, ಹೈಕೋರ್ಟ್‌ ಬಾರ್‌ ಅಸೋಸಿಯೇಷನ್‌ ವಿರುದ್ಧ ಬೆಂಗಳೂರು ವಕೀಲರ ಸಂಘ ದೂರು ಸಲ್ಲಿಸಿದ್ದು, ಆ ದೂರು ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದೆ. ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಸೆಕ್ಷನ್‌ 25ರಡಿ ಮತ್ತು ಸೆಕ್ಷನ್‌ 27ರ ಅನ್ವಯ ಸಂಘದ ಕಾರ್ಯ ಚಟುವಟಿಕೆ ನಿಲ್ಲಿಸುವಂತೆ ನಿರ್ದೇಶಿಸಲಾಗಿದೆ. ಹೈಕೋರ್ಟ್‌ ಬಾರ್‌ ಅಸೋಸಿಯೇಷನ್‌ ಆಗಸ್ಟ್‌ 22ರಿಂದ ಅನ್ವಯವಾಗುವಂತೆ ಯಥಾಸ್ಥಿತಿ ಕಾಪಾಡಬೇಕು. ದೂರು ಪರಿಶೀಲನೆಗೆ ಸೆಪ್ಟೆಂಬರ್‌ 9ರಂದು ವಿಚಾರಣೆ ನಿಗದಿಪಡಿಸಲಾಗಿದ್ದು, ಅಂದು ಹೈಕೋರ್ಟ್‌ ಬಾರ್‌ ಅಸೋಸಿಯೇಷನ್‌ ಹಾಗೂ ಬೆಂಗಳೂರು ವಕೀಲರ ಸಂಘ ಲಿಖಿತ ಹೇಳಿಕೆ ಮತ್ತು ಪೂರಕ ದಾಖಲೆಗಳೊಂದಿಗೆ ಖುದ್ದು ಹಾಜರಾಗಬೇಕು ಎಂದು ಬೆಂಗಳೂರಿನ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಆಗಸ್ಟ್‌ 21ರಂದು ಆದೇಶಿಸಿದ್ದಾರೆ.

Related Articles

Comments (0)

Leave a Comment