ಹೆಡ್ ಕಾನ್‌ಸ್ಟೆಬಲ್ ಜೈಲು ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್; ₹ 10 ಸಾವಿರ ಲಂಚ ಪಡೆವಾಗ ಸಿಕ್ಕಿಬಿದ್ದಿದ್ದ ಮಂಜಣ್ಣ

ಬೆಂಗಳೂರು: ವ್ಯಕ್ತಿಯೊಬ್ಬರ ವಿರುದ್ಧ ಬಾಕಿ ಇದ್ದ ಕ್ರಿಮಿನಲ್ ಪ್ರಕರಣ ಮುಕ್ತಾಯಗೊಳಿಸಲು 10 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ ಬಾಗಲಗುಂಟೆ ಪೊಲೀಸ್ ಠಾಣೆಯ ಮುಖ್ಯಪೇದೆ ಎಂ.ಕೆ. ಮಂಜಣ್ಣಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ.

ಗರಿಷ್ಠ 4 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಮಂಜಣ್ಣ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣವೇನು?
ರಾಜ ಅಲಿಯಾಸ್ ಆಂಡ್ರ್ಯೂ ಎಂಬಾತನ ವಿರುದ್ಧದ ಕ್ರಿಮಿನಲ್ ಪ್ರಕರಣವೊಂದನ್ನು ಮುಕ್ತಾಯಗೊಳಿಸಲು ಮಂಜಣ್ಣ 2017ರ ಜುಲೈ 15ರಂದು 10 ಸಾವಿರ ರೂ. ಲಂಚ ಸ್ವಿಕರಿಸುವಾಗ ನೇರವಾಗಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಆನಂತರ, ಎಸಿಬಿ ತನಿಖೆ ನಡೆಸಿ ಮಂಜಣ್ಣ ವಿರುದ್ಧ ವಿಶೇಷ‌ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.

ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಮಂಜಣ್ಣನಿಗೆ ಭ್ರಷ್ಟಾಚಾರ ನಿಗ್ರಹ (ಪಿಸಿ) ಕಾಯ್ದೆ ಸೆಕ್ಷನ್‌ 8 (ಲಂಚ ಸ್ವೀಕಾರ) ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ಹಾಗೂ ಸೆಕ್ಷನ್‌ 13(1)(ಡಿ) ಮತ್ತು 13(2) ಅಡಿಯಲ್ಲಿ (ಸರ್ಕಾರಿ ಸೇವಕನಾಗಿ ದುರ್ನಡತೆ ತೋರಿದ) 4 ವರ್ಷ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ವಿಶೇಷ ನ್ಯಾಯಾಲಯ ಆದೇಶಿಸಿತ್ತು.

ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಮಂಜಣ್ಣ, ಯಾರಿಂದ ಹಣ ಸ್ವೀಕರಿಸಲಾಗಿತ್ತೋ ಆ ವ್ಯಕ್ತಿಯ ವಿರುದ್ಧ ಯಾವ ಕ್ರಿಮಿನಲ್ ಪ್ರಕರಣವೂ ಬಾಕಿ ಇರಲಿಲ್ಲ. ಹಣ ವಸೂಲಿ ಮಾಡಿದಾಕ್ಷಣ ಅದು ಲಂಚದ ಹಣವೆಂದು ಹೇಳಲಾಗದು. ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಮತ್ತು ಲಂಚ ಸ್ವೀಕರಿಸಿದ ಆರೋಪವನ್ನು ತನಿಖಾಧಿಕಾರಿಗಳು ಸಾಬೀತುಪಡಿಸಿಲ್ಲ. ಆದ್ದರಿಂದ, ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ಮೇಲ್ಮನವಿ ವಜಾ-ಶಿಕ್ಷೆ ಕಾಯಂ:
ಆರೋಪಿಯ ವಾದ ತಿರಸ್ಕರಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ಮಂಜಣ್ಣ ಲಂಚಕ್ಕೆ ಬೇಡಿಕೆ ಇಟ್ಟಿರುವುದಕ್ಕೆ ಹಾಗೂ ಲಂಚ ಸ್ವೀಕರಿಸಿರುವುದಕ್ಕೆ ಸಾಕ್ಷ್ಯಗಳಿವೆ. ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿ ಮತ್ತು ಧ್ವನಿ ಮಾದರಿ ವರದಿ ಎರಡೂ ಆರೋಪಿಯ ವಿರುದ್ಧವಾಗಿವೆ. ಹಣ ಜಪ್ತಿ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ದೋಷಗಳಾಗಿರಬಹುದು. ಹಾಗೆಂದ ಮಾತ್ರಕ್ಕೆ ಸಂದೇಹದ ಪ್ರಯೋಜನದ (ಬೆನಿಫಿಟ್ ಆಫ್ ಡೌಟ್) ಅಡಿಯಲ್ಲಿ ಆರೋಪಿ ಪರವಾಗಿ ತೀರ್ಪು ನೀಡಲಾಗದು. ಭ್ರಷ್ಟಾಚಾರ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಮತ್ತು ಲಂಚ ಸ್ವೀಕೃತಿ ಸಾಬೀತಾಗಬೇಕು. ಈ ಪ್ರಕರಣದಲ್ಲಿ ಅದು ಸಾಬೀತಾಗಿದೆ. ಆದ್ದರಿಂದ, ಆರೋಪಿಗೆ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಕಾಯಂಗೊಳಿಸಲಾಗುತ್ತಿದೆ ಎಂದು ತಿಳಿಸಿ, ಮೇಲ್ಮನವಿ ವಜಾಗೊಳಿಸಿದೆ.

Related Articles

Comments (0)

Leave a Comment