ಕಮಾಂಡ್ ಆಸ್ಪತ್ರೆ ವಿಸ್ತರಣೆಗಾಗಿ 530 ಮರಗಳ ತೆರವಿಗೆ ಬ್ರೇಕ್; ಬಿಬಿಎಂಪಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
- by Prashanth Basavapatna
- January 22, 2025
- 202 Views

ಬೆಂಗಳೂರು: ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಮಾಂಡ್ ಆಸ್ಪತ್ರೆ ವಿಸ್ತರಣೆಯ ಉದ್ದೇಶಕ್ಕಾಗಿ 530 ಮರಗಳನ್ನು ಕತ್ತರಿಸಲು ಅನುಮತಿ ನೀಡಿ ಬಿಬಿಎಂಪಿ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮೆಟ್ರೊ ಯೋಜನೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ಕತ್ತರಿಸುವುದನ್ನು ಆಕ್ಷೇಪಿಸಿ ಟಿ.ದತ್ತಾತ್ರೇಯ ದೇವರೆ ಮತ್ತು ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ಇದೇ ವೇಳೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುವ ಮೆಟ್ರೊ ರೈಲು ಮಾರ್ಗದ ಕಾಮಗಾರಿಗಾಗಿ 75 ಮರಗಳನ್ನು ಕಡಿಯಲು ಅನುಮತಿ ನೀಡುವ ಬಗ್ಗೆ ಫೆಬ್ರವರಿ 4ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.
ನೆಲಮಂಗಲದಲ್ಲಿ ಅರಣ್ಯೀಕರಣಕ್ಕೆ ಆಕ್ಷೇಪ:
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಮಾಂಡ್ ಆಸ್ಪತ್ರೆಯ ವಿಸ್ತರಣೆಗಾಗಿ ಬಿಬಿಎಂಪಿಯ ವೃಕ್ಷ ಅಧಿಕಾರಿ 530 ಮರಗಳನ್ನು ಕತ್ತರಿಸಲು ಅನುಮತಿ ನೀಡಿದ್ದಾರೆ. ಆದರೆ, ಅದಕ್ಕೆ ಪರ್ಯಾಯಯವಾಗಿ ಎಷ್ಟು ಸಸಿಗಳನ್ನು ನೆಡಲಾಗುತ್ತಿದೆ ಎಂಬ ವಿವರಗಳನ್ನು ಉಲ್ಲೇಖಿಸಿಲ್ಲ. ಜತೆಗೆ, ಕಡಿಯುವ ಮರಗಳಿಗೆ ಪರ್ಯಾಯವಾಗಿ ಬಿಬಿಎಂಪಿ ವ್ಯಾಪ್ತಿಯಿಂದ 45 ಕಿ.ಮೀ. ದೂರದಲ್ಲಿ ಅಂದರೆ ನೆಲಮಂಗಲದಲ್ಲಿ ಅರಣ್ಯೀಕರಣ ಕೈಗೊಳ್ಳಲು ಉದ್ದೇಶಿಸಲಾಗಿದೆ. ನಗರದ ಹೃದಯ ಭಾಗದಲ್ಲಿ ಅಷ್ಟೊಂದು ಮರಗಳನ್ನು ಕಡಿದು, ಅವುಗಳಿಗೆ ಪರ್ಯಾಯವಾಗಿ ದೂರದಲ್ಲಿ ಸಸಿಗಳನ್ನು ನೆಟ್ಟರೆ ಪ್ರಯೋಜನವಿಲ್ಲ ಎಂದು ಆಕ್ಷೇಪಿಸಿದರು.
ನ್ಯಾಯಾಲಯದ ಹಿಂದಿನ ಆದೇಶಗಳ ಅನುಸಾರ ಮರಗಳನ್ನು ಕಟಾವು ಮಾಡುವ ಬಗ್ಗೆ ಕೋರ್ಟ್ ನೇಮಕ ಮಾಡಿರುವ ತಜ್ಞರ ಸಮಿತಿ ಮರಗಳನ್ನು ಕಡಿಯುವ ಕುರಿತು ಪರಿಶೀಲನೆ ನಡೆಸಿಲ್ಲ. ಮರಗಳನ್ನು ಕಡಿಯಲು ಅನುಮತಿ ನೀಡುವಾಗ ನಿಯಮಗಳನ್ನು ಪಾಲನೆ ಮಾಡಿಲ್ಲ. ಆದ್ದರಿಂದ, ಸದ್ಯಕ್ಕೆ ಮರಗಳನ್ನು ಕತ್ತರಿಸಲು ಅನುಮತಿ ನೀಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಅದನ್ನು ಪರಿಗಣಿಸಿದ ಪೀಠ, ಮುಂದಿನ ಆದೇಶವರೆಗೆ ಮರಗಳನ್ನು ಕತ್ತರಿಸಬಾರದು ಎಂದು ಮಧ್ಯಂತರ ಆದೇಶ ನೀಡಿತು.
ಮರಗಳ ತೆರವಿಗೆ ಅನುಮತಿ ಕೋರಿದ ಬಿಎಂಆರ್‌ಸಿಎಲ್:
ವಿಚಾರಣೆ ವೇಳೆ ಬಿಎಂಆರ್‌ಸಿಎಲ್ ಪರ ಹಾಜರಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುವ ಎತ್ತರಿಸಿದ ಮೆಟ್ರೊ ರೈಲು ಯೋಜನೆ ಕೈಗೊಳ್ಳಲಾಗಿದ್ದು, ಅದಕ್ಕಾಗಿ 75 ಮರಗಳನ್ನು ಕಡಿಯಬೇಕಾಗಿದೆ. ತಜ್ಞರ ಸಮಿತಿ ಪರಿಶೀಲನೆ ನಡೆಸಿ 75 ಮರಗಳಲ್ಲಿ 15 ಮರಗಳನ್ನು ಉಳಿಸಿಕೊಂಡು 55 ಮರಗಳನ್ನು ತೆರವು ಮಾಡಬಹುದು ಹಾಗೂ 5 ಮರಗಳನ್ನು ಸ್ಥಳಾಂತರಿಸಬಹುದು ಎಂದು ವರದಿ ನೀಡಿದೆ. ಆ ವರದಿಯ ಅನುಸಾರ 55 ಮರಗಳನ್ನು ಕತ್ತರಿಸಲು ತುರ್ತಾಗಿ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಬಿಎಂಆರ್‌ಸಿಎಲ್ ಪ್ರತಿ ಬಾರಿಯೂ ಮರಗಳನ್ನು ಕಡಿಯುವ ತುರ್ತು ಇದೆ, ಅನುಮತಿ ನೀಡದಿದ್ದರೆ ಯೋಜನಾ ವೆಚ್ಚ ಹೆಚ್ಚಲಿದೆ ಎಂಬ ನೆಪ ಹೇಳಿ ಅನುಮತಿ ಪಡೆಯುತ್ತಿದೆ. ಆದರೆ, ಮೆಟ್ರೊ ರೈಲು ನಿಗಮ ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ ಈವರೆಗೆ ಕತ್ತರಿಸಿರುವ ಮರಗಳಿಗೆ ಪರ್ಯಾಯವಾಗಿ 4 ಸಾವಿರ ಸಸಿಗಳನ್ನು ನೆಡಬೇಕಾಗಿತ್ತು. ಈವರೆಗೂ ಅವುಗಳನ್ನು ನೆಟ್ಟಿಲ್ಲ. ನ್ಯಾಯಾಲಯದ ಆದೇಶಗಳನ್ನು ನಿಗಮ ಪಾಲನೆ ಮಾಡುತ್ತಿಲ್ಲ. ಆದ್ದರಿಂದ, ಅನುಮತಿ ನೀಡಬಾರದು ಎಂದು ಕೋರಿದರು.
ಸುರಂಗ ಮೆಟ್ರೊ ಮಾರ್ಗದ ವೆಚ್ಚ 10 ಪಟ್ಟು ದುಬಾರಿ:
ವಿಚಾರಣೆ ಮಧ್ಯೆ ನ್ಯಾಯಮೂರ್ತಿ ಎಂ.ಐ. ಅರುಣ್ ಅವರು, ಬಿಎಂಆರ್‌ಸಿಎಲ್ ಸುರಂಗ ಮೆಟ್ರೊ ಮಾರ್ಗದ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿದರಲ್ಲದೆ, ಹಲವು ಪ್ರದೇಶಗಳಲ್ಲಿ ಮರಗಳನ್ನು ಕಡಿಯಲಾಗಿದೆ. ಹೆಚ್ಚು ಮರಗಳಿರುವ ಪ್ರದೇಶದಲ್ಲೇ ಮೆಟ್ರೊ ಮಾರ್ಗ ಹೋಗುತ್ತದೆ. ಜಯನಗರದ ಸೌಂತ್ ಎಂಡ್ ವೃತ್ತದಿಂದ ಜೆ.ಪಿ. ನಗರ ವರ್ತುಲ ರಸ್ತೆಯವರೆಗಿನ ಮೆಟ್ರೊ ಮಾರ್ಗದಲ್ಲೂ ಹಾಗೇ ಆಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಧ್ಯಾನ್ ಚಿನ್ನಪ್ಪ, ಮೆಟ್ರೊ ರೈಲಿಗಾಗಿ ಸುರಂಗ ನಿರ್ಮಿಸಿದರೆ ಅದಕ್ಕೆ ತಗುಲುವ ವೆಚ್ಚ ಸಾಮಾನ್ಯ ಮೆಟ್ರೊ ಹಳಿ ನಿರ್ಮಿಸುವುದಕ್ಕಿಂತ ಹತ್ತು ಪಟ್ಟು ಹೆಚ್ಚಿರುತ್ತದೆ. ಬಹುತೇಕ ಕಡೆ ರಸ್ತೆಯಲ್ಲಿಯೇ ಮೆಟ್ರೊ ಹಳಿ ರೂಪಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಹೊಂದಾಣಿಕೆ (ಅಲೇನ್‌ಮೆಂಟ್) ಬದಲಾಗುತ್ತದೆ. ಅದನ್ನು ಸರಿದೂಗಿಸಲು ಕೆಲ ಮರಗಳನ್ನು ಕಡಿಯಬೇಕಾಗುತ್ತದೆ. ಮರಗಳನ್ನು ಕಡಿಯುವ ಉದ್ದೇಶ ನಮ್ಮದೂ ಅಲ್ಲ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮೆಟ್ರೊ ಯೋಜನೆಗೆ ಮರ ಕತ್ತರಿಸಲು ಅನುಮತಿ ನೀಡುವ ಬಗ್ಗೆ ಫೆಬ್ರವರಿ 4ರಂದು ವಿಚಾರಣೆ ನಡೆಸುವುದಾಗಿ ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)