ಜಾತಿ ಗಣತಿ ಕುರಿತು ರಾಜ್ಯ ಸರ್ಕಾರದ ನಿಲುವೇನು? ಏಪ್ರಿಲ್ 24ರಂದು ತಿಳಿಸುವಂತೆ ಹೈಕೋರ್ಟ್ ಸೂಚನೆ
- by Jagan Ramesh
- April 22, 2025
- 247 Views

ಬೆಂಗಳೂರು: ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿ ಗಣತಿ ಕುರಿತು ಮುಂದಿನ ವಿಚಾರಣೆ ವೇಳೆಗೆ ನಿಲುವು ಸ್ಪಷ್ಟಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ರಾಜ್ಯದಲ್ಲಿ ಜಾತಿ ಗಣತಿ ಪ್ರಶ್ನಿಸಿ ಶಿವರಾಜ್ ಕಣಶೆಟ್ಟಿ ಮತ್ತಿತರರು ಹಾಗೂ ಜಾತಿ ಗಣತಿ ವರದಿ ಜಾರಿಗೆ ಕೋರಿ ಮುಖ್ಯಮಂತ್ರಿ ಚಂದ್ರು ಮತ್ತಿತರರು ಸಲ್ಲಿಸಿರುವ ಐದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿ, ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿತು.
ಇದರಿಂದ, ಈಗಾಗಲೇ ಜಾತಿಗಣತಿಯ ಅಡಕತ್ತರಿಯಲ್ಲಿ ಸಿಲುಕಿರುವ ಸರ್ಕಾರಕ್ಕೆ ಗುರುವಾರವೇ (ಏಪ್ರಿಲ್ 24) ನ್ಯಾಯಾಲಯದ ಮುಂದೆ ನಿಲುವು ಸ್ಪಷ್ಟಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇದಕ್ಕೂ ಮುನ್ನ ಜಾತಿಗಣತಿ ಪ್ರಶ್ನಿಸಿರುವ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಜಿ.ಆರ್. ಗುರುಮಠ್, ವಿವೇಕ್ ಸುಬ್ಬಾರೆಡ್ಡಿ ಮತ್ತಿತರರು, 10 ವರ್ಷಗಳಷ್ಟು ಹಳೆಯದಾದ ಜಾತಿ ಗಣತಿ ಜಾರಿಗೆ ಸರ್ಕಾರ ಅವಸರ ಮಾಡುತ್ತಿದೆ. ಆದರೆ, ವಾಸ್ತವವಾಗಿ ಜಾತಿ ಗಣತಿ ಮಾಡುವ ಅಧಿಕಾರವೇ ರಾಜ್ಯ ಸರಕಾರಕ್ಕೆ ಇಲ್ಲ ಎಂದು ಆಕ್ಷೇಪಿಸಿದರಲ್ಲದೆ, ಗಣತಿ ಸಂಬಂಧ ಸುಪ್ರೀಂಕೋರ್ಟ್ಗೆ ನೀಡಿದ್ದ ಮುಚ್ಚಳಿಕೆಯನ್ನೂ ಸರ್ಕಾರ ಉಲ್ಲಂಘಿಸುತ್ತಿದೆ. 2002ರ ಮಾರ್ಚ್ 30ರಂದು ರೂಪಿಸಿದ ಮೀಸಲಾತಿಯನ್ನು ಮುಂದುವರಿಸುವುದಾಗಿ ಸುಪ್ರೀಂಕೋರ್ಟ್ಗೆ ವಾಗ್ದಾನ ನೀಡಿದ್ದ ಸರ್ಕಾರ, ಈಗ ಅವೈಜ್ಞಾನಿಕವಾಗಿರುವ ಜಾತಿಗಣತಿ ಆಧರಿಸಿ ಮೀಸಲಾತಿ ಮರುರೂಪಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಜಾತಿಗಣತಿ ಬಗ್ಗೆ ನಿರ್ಧಾರ ಕೈಗೊಳ್ಳುವ ಕುರಿತು ಇದೇ 17ರಂದು ಸಚಿವ ಸಂಪುಟ ಸಭೆ ಚರ್ಚೆ ನಡೆಸಿದೆ. ಆದರೆ, ಆ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೆ ಮೇ 2ರಂದು ಆ ಬಗ್ಗೆ ತೀರ್ಮಾನಿಸಲು ವಿಶೇಷ ಸಂಪುಟ ಸಭೆ ಕರೆಯಲಾಗಿದೆ. ಆದ್ದರಿಂದ, ಅಧಿಕಾರವಿಲ್ಲದಿದ್ದರೂ ಸರ್ಕಾರ ನಡೆಸಿರುವ ಜಾತಿ ಗಣತಿ ವರದಿಯನ್ನು ತಡೆ ಹಿಡಿಯುವಂತೆ ಮತ್ತು ಅದನ್ನು ಜಾರಿಗೊಳಿಸದಂತೆ ಆದೇಶ ಹೊರಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಾಲಯ, ಜಾತಿ ಗಣತಿ ಕುರಿತು ಸರ್ಕಾರ ಮುಂದಿನ ವಿಚಾರಣೆ ವೇಳೆಗೆ ನಿಲುವು ಸ್ಪಷ್ಟಪಡಿಸಬೇಕೆಂದು ಸೂಚಿಸಿ ಅರ್ಜಿ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ನಿಗದಿಪಡಿಸಿತು.
Related Articles
Thank you for your comment. It is awaiting moderation.
Comments (0)