ಜಾಲಿ ಎಲ್ಎಲ್ಬಿ 3 ಬಿಡುಗಡೆಗೆ ನಿರ್ಬಂಧ ಕೋರಿದ್ದ ಪಿಐಎಲ್ ವಜಾ; ಅರ್ಜಿದಾರೆಗೆ ₹50 ಸಾವಿರ ದಂಡ ವಿಧಿಸಿದ ಹೈಕೋರ್ಟ್
- by Jagan Ramesh
- September 18, 2025
- 25 Views

ಬೆಂಗಳೂರು: ಸೆಪ್ಟೆಂಬರ್ 19ರಂದು ತೆರೆ ಕಾಣಲಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಅರ್ಷದ್ ವಾರ್ಸಿ ಪ್ರಧಾನ ಭೂಮಿಕೆಯ ಹಿಂದಿ ಚಲನಚಿತ್ರ ‘ಜಾಲಿ ಎಲ್ಎಲ್ಬಿ-3’ ಬಿಡುಗಡೆಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ನ್ಯಾಯಾಲಯದ ಸಮಯ ವ್ಯರ್ಥಪಡಿಸಿದ್ದಕ್ಕಾಗಿ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಚಿತ್ರದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನಿಸಲಾಗಿದೆ ಎಂದು ಆಕ್ಷೇಪಿಸಿ ಬೆಂಗಳೂರಿನ ಸಯೀದಾ ನಿಲುಫರ್ (27) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿದಾರೆಗೆ ದಂಡ ವಿಧಿಸಿ, ಪಿಐಎಲ್ ವಜಾಗೊಳಿಸಿತಲ್ಲದೆ, ದಂಡದ ಮೊತ್ತವನ್ನು ರಿಜಿಸ್ಟ್ರಿಯಲ್ಲಿ ಠೇವಣಿ ಇಡಬೇಕು. ತಪ್ಪಿದರೆ ಅಕ್ಟೋಬರ್ 4ರಂದು ಪ್ರಕರಣವನ್ನು ಅರ್ಜಿದಾರೆಯ ವಿರುದ್ಧ ಕ್ರಮ ಜರುಗಿಸಲು ಪಟ್ಟಿ ಮಾಡುವಂತೆ ಆದೇಶಿಸಿತು.
ವಿಚಾರಣೆ ವೇಳೆ ಅರ್ಜಿದಾರೆಯ ಪರ ವಕೀಲರು ವಾದ ಮಂಡಿಸಿ, ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ನಲ್ಲಿ ಕೆಲ ಸಂಭಾಷಣೆಗಳು ನ್ಯಾಯಾಂಗ ವ್ಯವಸ್ಥೆ, ನ್ಯಾಯಮೂರ್ತಿಗಳು, ವಕೀಲರನ್ನು ಅಪಮಾನಿಸುವಂತಿವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದು ಹಾಸ್ಯದ ಚಿತ್ರವಲ್ಲವೇ, ಪ್ರೇಕ್ಷಕರ ಹಾಸ್ಯ ಪ್ರಜ್ಞೆಯನ್ನು ಕೆರಳಿಸುವ ಉದ್ದೇಶ ಹೊಂದಿರಬಹುದು. ಇದು ನಿಮಗೆ ಮತ್ತು ನಮಗೆ ಏನನ್ನೂ ಮಾಡದಿರಬಹುದು. ಇದರರ್ಥ ಅದನ್ನು ಮೊಟಕುಗೊಳಿಸಬೇಕು ಎಂದಲ್ಲ ಎಂದು ಹೇಳಿತು.
ನ್ಯಾಯಾಲಯದ ಕಲಾಪವನ್ನು ಚಿತ್ರದಲ್ಲಿ ಬಿಂಬಿಸಿ ಪ್ರೇಕ್ಷಕರಲ್ಲಿ ನಗೆ ಉಕ್ಕಿಸುವುದು ಸಾಮಾನ್ಯವಾಗಿದ್ದು, ಇದರಿಂದ ಅರ್ಜಿದಾರೆ ಅಥವಾ ನ್ಯಾಯಾಲಯದ ಹಾಸ್ಯಪ್ರಜ್ಞೆ ಕೆರಳದಿರಬಹುದು. ಇದು ಸೃಜನಶೀಲತೆಯನ್ನು ಹತ್ತಿಕ್ಕಲು ಅಥವಾ ಅದಕ್ಕೆ ಸೆನ್ಸಾರ್ ವಿಧಿಸಲು ಆಧಾರವಾಗುವುದಿಲ್ಲ. ಇಂಥ ಪಿಐಎಲ್ಗಳು ನ್ಯಾಯಾಂಗದ ಸಮಯ ವ್ಯರ್ಥ ಮಾಡಲಿದ್ದು, ಅದಕ್ಕಾಗಿಯೇ ಅರ್ಜಿ ಸಲ್ಲಿಸಿದಂತಿದೆ ಎಂದು ಅಭಿಪ್ರಾಯಪಟ್ಟ ಪೀಠ, ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿ, ಪಿಐಎಲ್ ವಜಾಗೊಳಿಸಿತು.
ಅರ್ಜಿದಾರರ ಮನವಿ ಏನು?
ಜಾಲಿ ಎಲ್ಎಲ್ಬಿ 3 ಚಲನಚಿತ್ರದಲ್ಲಿ ತೋರಿಸಲಾಗಿರುವ ಸಂಭಾಷಣೆಯು ಮಾನಹಾನಿಕಾರವಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆಯಾಗಿದೆ. ಆದ್ದರಿಂದ, ಕಲಾವಿದರು ಮತ್ತು ಚಿತ್ರ ತಯಾರಕರು ರಾಷ್ಟ್ರಮಟ್ಟದಲ್ಲಿ ಪ್ರಸರಣ ಹೊಂದಿರುವ ಪತ್ರಿಕೆಗಳಲ್ಲಿ ಬೇಷರತ್ ಕ್ಷಮೆ ಕೋರಲು ನಿರ್ದೇಶಿಸಬೇಕು. ಪ್ರಕರಣದ ತನಿಖೆ ನಡೆಸಿ, ನಟರು, ಸಿನಿಮಾ ತಯಾರಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಕ್ರಮಕೈಗೊಳ್ಳಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
Related Articles
Thank you for your comment. It is awaiting moderation.
Comments (0)