ಕೆಲಸದಿಂದ ವಜಾಗೊಳಿಸಿದ್ದಕ್ಕೆ ಲೈಂಗಿಕ ಕಿರುಕುಳ ದೂರು: ಸಿಬ್ಬಂದಿ ವಿರುದ್ಧದ ಪ್ರಕರಣ ರದ್ದು
- by Jagan Ramesh
- August 16, 2024
- 292 Views
ಬೆಂಗಳೂರು: ಉದ್ಯೋಗ ಸ್ಥಳದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಸ್ವಿಡ್ಜರ್ಲೆಂಡ್ ಮೂಲದ ಖಾಸಗಿ ಕಂಪನಿಯ ನಿರ್ದೇಶಕರೂ ಸೇರಿ 11 ಮಂದಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ರದ್ದು ಕೋರಿ ಸ್ವಿಸ್ ರೀಇನ್ಶ್ಯೂರೆನ್ಸ್ ಕಂಪನಿ ಲಿ. ನ ನಿರ್ದೇಶಕಿ ಜ್ಯೂರಿಚ್ನ ಸಬೈನ್ ಬೇಚ್ಲರ್ ಹಾಗೂ ಸಂಸ್ಥೆಯ ಬೆಂಗಳೂರು ಶಾಖೆಯ ಸಿಬ್ಬಂದಿ ಸೇರಿ 12 ಆರೋಪಿಗಳು ಹೈಕೋರ್ಟ್ಗೆ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಅರ್ಜಿಗಳನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ನಿರ್ದೇಶಕಿಯೂ ಸೇರಿ 11 ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದ್ದು, ದೂರುದಾರ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ 7ನೇ ಆರೋಪಿ ನೋಯೆಲ್ ಡಿ’ಸೋಜಾ ಎಂಬಾತನ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ಹೈಕೋರ್ಟ್ ಹೇಳಿದ್ದೇನು?
ದೂರುದಾರ ಮಹಿಳೆ ವಿರುದ್ಧ ಕೇಳಿ ಬಂದಿದ್ದ ಕೆಲ ಅವ್ಯವಹಾರಗಳ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇದಕ್ಕೆ ಪ್ರತಿರೋಧವಾಗಿ ಕಂಪನಿಯ ಇತರ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಯುತ್ತದೆ. ಪ್ರಕರಣದ ದೂರಿನಲ್ಲಿ 7ನೇ ಆರೋಪಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆದರೆ, ಇತರ ಆರೋಪಿಗಳ ವಿರುದ್ಧ ಯಾವುದೇ ಆರೋಪವನ್ನು ಸರಿಯಾದ ರೀತಿಯಲ್ಲಿ ವಿವರಿಸಿಲ್ಲ. ಇದನ್ನು ಗಮನಿಸಿದರೆ, ಉದ್ಯೋಗದಿಂದ ವಜಾಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ದೂರು ದಾಖಲಿಸಲಾಗಿದೆ ಎಂಬ ಅಂಶ ಸ್ಟಷ್ಟವಾಗಲಿದೆ. ದೂರುದಾರರು ಮನಸ್ಸಿಗೆ ಬಂದವರನ್ನು ಪ್ರಕರಣದಲ್ಲಿ ಎಳೆದು ಸಿಲುಕಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ತಿಳಿಯಲಿದೆ. ಆದರೆ, ಪ್ರಕರಣದ 7ನೇ ಆರೋಪಿ ವಿರುದ್ಧದ ಆರೋಪ ಗಂಭೀರವಾಗಿದ್ದು, ಅವರ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿಸುವ ಅಗತ್ಯವಿದೆ ಎಂದಿರುವ ಪೀಠ, 7ನೇ ಆರೋಪಿ ಹೊರತುಪಡಿಸಿ ಉಳಿದೆಲ್ಲ ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದೆ.
ಪ್ರಕರಣವೇನು?
ಸ್ವಿಡ್ಜರ್ಲೆಂಡ್ನ ಜ್ಯೂರಿಚ್ ನಗರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸ್ವಿಸ್ ರೀಇನ್ಶ್ಯೂರೆನ್ಸ್ ಕಂಪನಿ ಲಿಮಿಟೆಡ್ನ ಒಂದು ಘಟಕದಲ್ಲಿ ದೂರುದಾರ ಮಹಿಳೆ ಲೆಕ್ಕ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ನಡುವೆ ಪ್ರಕರಣದ 7 ಮತ್ತು 10ನೇ ಆರೋಪಿಗಳು ದೂರುದಾರರ ವಿರುದ್ಧ ಸಂಸ್ಥೆಯ ನಿರ್ದೇಶನಗಳ ಸಂಹಿತೆ ಉಲ್ಲಂಘಿಸಿದ ಆರೋಪ ಮಾಡಿದ್ದರು.
ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶೋಕಾಸ್ ನೋಟಿಸ್ ನೀಡಿ, ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.
ಉದ್ಯೋಗದಿಂದ ತೆಗೆದು ಹಾಕಿದ್ದರಿಂದ ಸೂಕ್ತ ಪರಿಹಾರ ನೀಡುವಂತೆ ಕೋರಿ 2019ರಲ್ಲಿ ಮಹಿಳೆ ಕಂಪನಿ ವಿರುದ್ಧ ಸಿವಿಲ್ ದಾವೆ ಹೂಡಿದ್ದರು. ಇದಾದ ನಾಲ್ಕು ತಿಂಗಳ ಬಳಿಕ ಉದ್ಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ಕಚೇರಿಯಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಆರೋಪಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಅಲ್ಲಗಳೆದಿದ್ದ ಕಂಪನಿ, ಉದ್ಯೋಗದಿಂದ ತೆಗೆದು ಹಾಕಿದ ಪರಿಣಾಮ ಈ ರೀತಿಯ ಆರೋಪ ಹೊರಿಸಲಾಗಿದೆ ಎಂದು ವಿವರಣೆ ನೀಡಿದ್ದರು.
ಇದಾದ 15 ತಿಂಗಳ ಬಳಿಕ 2021ರಲ್ಲಿ ದೂರುದಾರ ಮಹಿಳೆ ಕಂಪನಿಯ ಭಾರತದ ಘಟಕದಲ್ಲಿನ ಹಲವು ಮಂದಿಯ ವಿರುದ್ಧ ಖಾಸಗಿ ದೂರು ದಾಖಲಿಸಿ, ಏಳನೇ ಆರೋಪಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಇತರ ಆರೋಪಿಗಳು ಅದಕ್ಕೆ ಸಹಕರಿಸಿದ್ದಾರೆ. ಇದೇ ಕಾರಣಕ್ಕೆ ತಮ್ಮನ್ನು ಕೆಲಸದಿಂದ ತೆಗೆದುಕಲಾಗಿದೆ ಎಂದು ಆರೋಪಿಸಿದ್ದರು. ಈ ಪ್ರಕರಣ ರದ್ದುಕೋರಿ ಎಲ್ಲ 12 ಮಂದಿ ಹೈಕೋರ್ಟ್ ಮೊರೆ ಹೋಗಿದ್ದರು.
Related Articles
Thank you for your comment. It is awaiting moderation.
Comments (0)