ದಾವಣಗೆರೆ ಎಸ್‌ಪಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಶಾಸಕ ಬಿ.ಪಿ. ಹರೀಶ್ ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್
- by Jagan Ramesh
- September 12, 2025
- 62 Views

ಬೆಂಗಳೂರು: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ (ಎಸ್‌ಪಿ) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್, ಪ್ರಕರಣದ ತನಿಖೆಗೆ ಸಹಕರಿಸುವಂತೆ ಬಿ.ಪಿ. ಹರೀಶ್ ಅವರಿಗೆ ನಿರ್ದೇಶಿಸಿದೆ.
ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಶಾಸಕ ಬಿ.ಪಿ. ಹರೀಶ್ ಸಲ್ಲಿಸಿರುವ ಅರ್ಜಿ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು. ಇದೇ ವೇಳೆ, ಪ್ರತಿವಾದಿಗಳಾದ ಕೆಟಿಜೆ ನಗರ ಪೊಲೀಸರು ಹಾಗೂ ದೂರುದಾರರಾದ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಬಿ.ಪಿ. ಹರೀಶ್ ಪರ ವಕೀಲರಾದ ವೆಂಕಟೇಶ್ ಪಿ. ದಳವಾಯಿ ವಾದ ಮಂಡಿಸಿ, ಅರ್ಜಿದಾರರು ಪೊಲೀಸ್ ವರಿಷ್ಠಾಧಿಕಾರಿಗಳ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡಿಲ್ಲ. ಜಿಲ್ಲಾ ಸಚಿವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಎಸ್‌ಪಿ ಸೇರಿ ಇತರ ಉನ್ನತ ಮಟ್ಟದ ಅಧಿಕಾರಿಗಳಿಗೆ ಗೌರವ ನೀಡದೆ, ಮನಬಂದಂತೆ ನಡೆಸಿಕೊಳ್ಳುತ್ತಾರೆ ಎಂಬ ನೆಲೆಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿ ಈಗಾಗಲೇ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅರ್ಜಿದಾರರು ಪೊಲೀಸ್ ವರಿಷ್ಠಾಧಿಕಾರಿ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಬದಲಿಗೆ, ವ್ಯವಸ್ಥೆಯನ್ನು ಟೀಕಿಸುವ ಧಾವಂತದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ಇದೀಗ ಘಟನೆಗೆ ರಾಜಕೀಯ ಸ್ವರೂಪ ನೀಡಿ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಈ ಮೂಲಕ ಕಾನೂನು ಪ್ರಕ್ರಿಯೆ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಎಫ್ಐಆರ್ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ಪ್ರಕರಣವೇನು?
ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಗೆ ಸೆಪ್ಟೆಂಬರ್ 2ರ ರಾತ್ರಿ 10 ಗಂಟೆಗೆ ತೆರಳಿ ದೂರು ನೀಡಿದ್ದ ಎಸ್‌ಪಿ ಉಮಾ ಪ್ರಶಾಂತ್ ಅವರು, ದಾವಣಗೆರೆ ಪ್ರೆಸ್‌ಕ್ಲಬ್‌ನಲ್ಲಿ ಸೆಪ್ಟೆಂಬರ್ 2ರಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ್ದ ಹರಿಹರ ಶಾಸಕ ಬಿ.ಪಿ. ಹರೀಶ್ ಅವರು, ಜಿಲ್ಲಾ ಎಸ್ಪಿ ಅವರು ಶಾಮನೂರು ಮನೆಯ ಪೊಮೆರೇಯನ್ ನಾಯಿಯಂತೆ ವರ್ತಿಸುತ್ತಾರೆ. ಇವರಿಗೆ ಅಧಿಕಾರದಲ್ಲಿರುವವರು ಮಾತ್ರ ಮುಖ್ಯವಾಗಿ ಕಾಣುತ್ತಾರೆ ಎನ್ನಿಸುತ್ತದೆ. ಎಲ್ಲ ಜನಪ್ರತಿನಿಧಿಗಳನ್ನೂ ಸಮಾನವಾಗಿ ಕಾಣುವ ದೃಷ್ಟಿಕೋನ ಇಲ್ಲ ಎಂದೆಲ್ಲ ಅಪಮಾನಕರವಾಗಿ ಅಸಭ್ಯ ಮಾತನಾಡಿದ್ದಾರೆ ಎಂದು ಆರೋಪಿಸಿದ್ದರು.
ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಯಾದ ನನ್ನನ್ನು ಒಬ್ಬ ಮಹಿಳೆ ಎಂದೂ ನೋಡದೆ, ಮಾಧ್ಯಮದವರ ಮುಂದೆ ಮಾನಹಾನಿಕರವಾದ ಮಾತುಗಳನ್ನಾಡಿದ್ದಾರೆ. ಈ ಸಂಬಂಧ ಮಾಧ್ಯಮಗಳಲ್ಲಿ ವಿಡಿಯೊ ನೋಡಿ ನನ್ನ ಮನಸಿಗೆ ತೀವ್ರ ಸ್ವರೂಪದ ಆಘಾತ ಹಾಗೂ ಘಾಸಿಯಾಗಿದೆ. ಆದ್ದರಿಂದ, ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದರು.
ಎಸ್‌ಪಿ ಅವರ ದೂರು ಆಧರಿಸಿ, ಶಾಸಕ ಬಿ.ಪಿ. ಹರೀಶ್ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 79 (ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವುದು) ಹಾಗೂ 132 (ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಇದರಿಂದ, ಎಫ್‌ಐಆರ್ ರದ್ದು ಕೋರಿ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.
Comments (0)