ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಿದ ಪಿಐಎಲ್; ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್
- by Prashanth Basavapatna
- September 19, 2025
- 306 Views

ಬೆಂಗಳೂರು: ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಸಂಬಂಧ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಸಮೀಕ್ಷೆಗಾಗಿ ಆಗಸ್ಟ್ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ.ಎನ್. ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್ಗಳನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿಗಳ ಕುರಿತು ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಕೇಂದ್ರ ಜನಗಣತಿ ಆಯೋಗ, ಗಣತಿ ರಿಜಿಸ್ಟ್ರಾರ್ ಸೇರಿ ಎಲ್ಲ ಸಂಬಂಧಿತ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಸಮೀಕ್ಷೆಗೆ ತಡೆ ಕೋರಿರುವ ಮಧ್ಯಂತರ ಮನವಿ ಕುರಿತು ಸೋಮವಾರ ವಿಚಾರಣೆ ನಡೆಸುವುದಾಗಿ ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ, ಅರ್ಜಿದಾರರಲ್ಲೊಬ್ಬರಾದ ಉದಯ್ಶಂಕರ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ಈಗಾಗಲೇ ಸಮೀಕ್ಷೆ ಆರಂಭಿಸಲಾಗಿದೆ ಎಂಬ ಹೇಳಿಕೆಯನ್ನು ಆಯೋಗ ನೀಡಬಾರದು. ಏಕೆಂದರೆ, ನಂತರ ಅದನ್ನು ಹಿಂದೆ ಸರಿಯುವಂತೆ ಮಾಡಲಾಗದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು, ಈಗಾಗಲೇ ಎರಡು ಕೋಟಿ ಕುಟುಂಬಗಳಿಗೆ ಸಮೀಕ್ಷೆಯ ಪ್ರತಿಯನ್ನು ಪೂರೈಸಲಾಗಿದೆ. ಅರ್ಜಿದಾರರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದರು.
ಮುಂದುವರಿದ ಜಾತಿಗಳಿಂದ ಸಮೀಕ್ಷೆ ತಡೆಗೆ ಯತ್ನ:
ಮತ್ತೊಬ್ಬ ಅರ್ಜಿದಾರರಾದ ಸುಬ್ಬಾರೆಡ್ಡಿ ಪರ ಹಿರಿಯ ವಕೀಲ ವಿವೇಕ್ ರೆಡ್ಡಿ ಅವರು, ಸೆಪ್ಟೆಂಬರ್ 22ಕ್ಕೆ ಸಮೀಕ್ಷೆ ಆರಂಭವಾಗುತ್ತದೆ ಎಂದು ಹೇಳಲಾಗಿದೆ. ವಿಭಾಗೀಯ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸುವವರೆಗೆ ಸಮೀಕ್ಷೆ ಮುಂದುವರಿಕೆಯಿಂದ ಹಿಂದೆ ಸರಿಯಬೇಕು. ಸರ್ಕಾರ ನಡೆಸುತ್ತಿರುವ ವಿಧಾನಕ್ಕೆ ನಾವು ಆಕ್ಷೇಪಿಸಿದ್ದೇವೆ ಎಂದರು.
ಈ ವೇಳೆ ಪ್ರೊ. ರವಿವರ್ಮ ಕುಮಾರ್ ಅವರು, ಸಲ್ಲಿಕೆಯಾಗಿರುವ ಅರ್ಜಿಗಳನ್ನು ಗಮನಿಸಿದರೆ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯ ಪ್ರಕಾರ ಮುಂದುವರಿದ ಜಾತಿಗಳು ಎನಿಸಿಕೊಂಡಿರುವವರೆ ಅರ್ಜಿದಾರರ ರೂಪದಲ್ಲಿ ಸಮೀಕ್ಷೆಯನ್ನು ತಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ದತ್ತಾಂಶಕ್ಕೆ ಭದ್ರತೆ ಇಲ್ಲ:
ಹಿರಿಯ ವಕೀಲ ಶ್ರೀರಂಗ ಅವರು, ಜಾತಿ ಸಮೀಕ್ಷೆಯಲ್ಲಿ ದತ್ತಾಂಶ ಸಂಗ್ರಹಿಸಲು ಇಂಧನ ಇಲಾಖೆಯಲ್ಲಿ ಮೀಟರ್ ರೀಡರ್ಗಳಾಗಿರುವವರ ಸೇವೆ ಪಡೆಯಲು ಮುಂದಾಗಲಾಗಿದೆ. ಖಾಸಗಿ ಕಂಪನಿಗಳು ಮೀಟರ್ ರೀಡಿಂಗ್ ಕೆಲಸ ಮಾಡುತ್ತಿವೆ. ದತ್ತಾಂಶವು ಖಾಸಗಿ ಸಂಸ್ಥೆಗಳ ಕೈಸೇರಲಿದ್ದು, ಅದಕ್ಕೆ ಯಾವುದೇ ಭದ್ರತೆ ಇಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ, ಇಂದು ಅಡ್ವೊಕೇಟ್ ಜನರಲ್ ಅವರು ಲಭ್ಯವಿಲ್ಲದ ಕಾರಣ ಅರ್ಜಿಯನ್ನು ಸೋಮವಾರ ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿತು.
ಅರ್ಜಿದಾರರ ಮನವಿ:
ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆ-1995 ಸಂವಿಧಾನದ ಪರಿಚ್ಛೇದ 340ಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ವಜಾಗೊಳಿಸಬೇಕು. ಇಲ್ಲವಾದಲ್ಲಿ ಅದಕ್ಕೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ 2014ರ ಸೆಕ್ಷನ್ 9(1) ಅನ್ನು ಕಾನೂನುಬಾಹಿರ ಎಂದು ಘೋಷಿಸಬೇಕು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸಲು ಆದೇಶಿಸಬೇಕು. ಸಮೀಕ್ಷೆಗಾಗಿ 2025ರ ಆಗಸ್ಟ್ 13ರಂದು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಹಾಗೂ ಸಮೀಕ್ಷೆ ನಡೆಸಲು ವಿದ್ಯುತ್ ಮೀಟರ್ಗಳನ್ನು ಬಳಕೆ ಮಾಡಿಕೊಳ್ಳದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎನ್ನುವುದೂ ಸೇರಿ ಪ್ರತ್ಯೇಕ ಅರ್ಜಿಗಳಲ್ಲಿ ಹಲವು ಮನವಿಗಳನ್ನು ಮಾಡಿರುವ ಅರ್ಜಿದಾರರು, ಅರ್ಜಿಗಳು ಇತ್ಯರ್ಥವಾಗುವವರೆಗೆ ಸಮೀಕ್ಷೆಗೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)