ಎಸ್‌ಸಿ ವರ್ಗೀಕರಣ ಹಾಗೂ ಒಳಮೀಸಲಾತಿ ನಿಗದಿ ಪ್ರಶ್ನಿಸಿದ ಅರ್ಜಿ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by Ramya B T
- November 3, 2025
- 26 Views
ಬೆಂಗಳೂರು: ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ವರ್ಗೀಕರಣ ಹಾಗೂ ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿರುವ ನಿರ್ಣಯ ಆಕ್ಷೇಪಿಸಿ ಬಂಜಾರ, ಭೋವಿ, ಕೊರಮ ಮತ್ತು ಕೊರಚ ಸಮುದಾಯಗಳು ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿ ಎಚ್. ನಾಗಮೋಹನ್ ದಾಸ್ ಆಯೋಗದ ವರದಿ ಆಧರಿಸಿ 2025ರ ಆಗಸ್ಟ್ 19ರಂದು ಸಚಿವ ಸಂಪುಟ ಕೈಗೊಂಡಿರುವ ನಿರ್ಣಯ ಪ್ರಶ್ನಿಸಿ ‘ಬಂಜಾರ, ಭೋವಿ, ಕೊರಮ, ಕೊರಚ ಸಮಾಜ ಕಲ್ಯಾಣ ಸಂಘ’ದ ಶಾಮರಾವ್ ಕೆ. ಪವಾರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು, ಇದು ಮೀಸಲಾತಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿ ವರದಿ ಆಧರಿಸಿ ಮೀಸಲಾತಿ ಹಂಚಿಕೆ ಮಾಡಿರುವುದನ್ನು ಪ್ರಶ್ನಿಸಿಲಾಗಿದೆ ಎಂದರು.
ಇದನ್ನು ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಮತ್ತು ಜಂಟಿ ಕಾರ್ಯದರ್ಶಿಗಳು, ಆಯುಕ್ತರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಮುಖ್ಯಸ್ಥರಿಗೆ ನೋಟಿಸ್ ನೋಟಿಸ್ ಜಾರಿಗೊಳಿಸಿತಲ್ಲದೆ, ನ್ಯಾ. ನಾಗಮೋಹನ್ ದಾಸ್ ವರದಿ ಅನುಸಾರ ಹಂಚಿಕೆ ಮಾಡಲಾಗಿರುವ ಮೀಸಲಾತಿ ಅನ್ವಯ ಹೊಸ ನೇಮಕಾತಿ ಮಾಡುವುದಕ್ಕೆ ತಡೆ ನೀಡಲಾಗಿರುವ ಮತ್ತೊಂದು ಅರ್ಜಿಯನ್ನೂ ಇದರ ಜತೆ ವಿಚಾರಣೆಗೆ ಪಟ್ಟಿ ಮಾಡುವಂತೆ ಆದೇಶಿಸಿತು.
ಆಗ, ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಅದಕ್ಕೆ ನ್ಯಾಯಪೀಠ, ಒಳ ಮೀಸಲಾತಿ ನಿರ್ಣಯದ ಅನ್ವಯ ನೇಮಕಾತಿ ಮಾಡದಂತೆ ತಡೆ ನೀಡಿರುವುದರಿಂದ ಈ ಅರ್ಜಿಯಲ್ಲಿ ಮತ್ತೊಮ್ಮೆ ಮಧ್ಯಂತರ ಆದೇಶ ನೀಡುವ ಅಗತ್ಯವಿಲ್ಲ ಎಂದು ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಆಕ್ಷೇಪವೇನು?
ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಸಲ್ಲಿರುವ ವರದಿಯಲ್ಲಿನ ಜಾತಿವಾರು ವರ್ಗೀಕರಣವನ್ನು ಸ್ವಲ್ಪ ಪರಿಷ್ಕರಿಸಿ 101 ಪರಿಶಿಷ್ಟ ಜಾತಿಗಳನ್ನು 3 ಗುಂಪುಗಳಾಗಿ, ಅಂದರೆ ಎಡಗೈ, ಬಲಗೈ ಮತ್ತು ಸ್ಪೃಶ್ಯ ಎಂದು ವರ್ಗೀಕರಿಸಿ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ, ಎಸ್‌ಸಿಯವರಿಗೆ ಇರುವ ಶೇ.17 ಮೀಸಲಾತಿಯನ್ನು ಎಡಗೈ-ಬಲಗೈ ಸಮುದಾಯಗಳಿಗೆ ತಲಾ ಶೇ.6, ಕೊರಚ, ಕೊರಮ, ಭೋವಿ, ಲಂಬಾಣಿ ಜಾತಿಗಳನ್ನೊಳಗೊಂಡ ಸ್ಪೃಶ್ಯ ಗುಂಪುಗಳಿಗೆ ಶೇ.5 ಮೀಸಲಾತಿ ನಿಗದಿಪಡಿಸಲಾಗಿತ್ತು. ಈ ನಿರ್ಣಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
Related Articles
Thank you for your comment. It is awaiting moderation.


Comments (0)