ಮಂಗಳೂರು-ಕಾರ್ಕಳ ನಡುವೆ ಹೊಸ ಕೆಎಸ್‌ಆರ್‌ಟಿಸಿ ಟ್ರಿಪ್ ಪರ್ಮಿಟ್ ಪ್ರಶ್ನಿಸಿ ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by Jagan Ramesh
- April 7, 2025
- 302 Views

ಬೆಂಗಳೂರು: ಮಂಗಳೂರು – ಕಾರ್ಕಳ ಮಾರ್ಗದಲ್ಲಿ ನಾಲ್ಕು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ದಿನದಲ್ಲಿ ಐದು ಸಿಂಗಲ್ ಟ್ರಿಪ್‌ಗಳಿಗೆ ಹೊಸದಾಗಿ ಪರ್ಮಿಟ್ ನೀಡಲಾಗಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಖಾಸಗಿ ಬಸ್ ಮಾಲೀಕರಾದ ಉಡುಪಿ ಜಿಲ್ಲೆ ಕಾಪು ನಿವಾಸಿ ವಿಜಯಾ ಎಚ್. ತಂತ್ರಿ ಮತ್ತಿತರರು ಸಲ್ಲಿಸಿರುವ ರಿಟ್ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಾದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು, ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು.
ಹೊಸ ಪರ್ಮಿಟ್ ನೀಡುವ ಮೊದಲು ‘ನೂತನ ಸಮಗ್ರ ಪ್ರದೇಶ ಯೋಜನೆ – 2019’ರ ಅನ್ವಯ ಸಾರಿಗೆ ಬೇಡಿಕೆ ಕುರಿತು ಜಂಟಿ ಸಮೀಕ್ಷೆ ನಡೆಸಲಾಗಿದೆಯೇ ಎಂಬ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಿದ ಪೀಠ, ಹೊಸ ಟ್ರಿಪ್‌ಗಳಿಗೆ ವೇಳಾಪಟ್ಟಿ ನಿಗದಿಪಡಿಸುವ ಸಂಬಂಧ ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಏಪ್ರಿಲ್ 8ರಂದು ಕರೆದಿರುವ ಸಭೆಯ ನಿರ್ಣಯವು ಈ ಅರ್ಜಿ ಕುರಿತ ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಡಲಿದೆ ಎಂದೂ ಸ್ಪಷ್ಟಪಡಿಸಿತು.
ಅರ್ಜಿದಾರರ ಆಕ್ಷೇಪವೇನು?
ಮಂಗಳೂರು – ಕಾರ್ಕಳ ನಡುವೆ ನಾಲ್ಕು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ದಿನದಲ್ಲಿ ಐದು ಸಿಂಗಲ್ ಟ್ರಿಪ್‌ಗಳಿಗೆ ಹೊಸದಾಗಿ ಪರ್ಮಿಟ್ ಮಂಜೂರು ಮಾಡಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು 2025ರ ಮಾರ್ಚ್ 17ರಂದು ಅಧಿಸೂಚನೆ ಹೊರಡಿಸಿದ್ದರು. ಈ ಅಧಿಸೂಚನೆಯು 2019ರ ‘ನೂತನ ಸಮಗ್ರ ಪ್ರದೇಶ ಯೋಜನೆ’ಗೆ ತದ್ವಿರುದ್ಧವಾಗಿದ್ದು, ಖಾಸಗಿ ಬಸ್ ಮಾಲೀಕರ ಅಹವಾಲು ಆಲಿಸದೇ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
Related Articles
Thank you for your comment. It is awaiting moderation.
Comments (0)