ಬಿಬಿಎಂಪಿ ಸಹಾಯಕ ಸಿವಿಲ್ ಇಂಜಿನಿಯರ್ ನೇಮಕಾತಿ ಅಧಿಸೂಚನೆ ಪ್ರಶ್ನಿಸಿ ಅರ್ಜಿ; ಸರ್ಕಾರ, ಕೆಪಿಎಸ್‌ಸಿಗೆ ಹೈಕೋರ್ಟ್ ನೋಟಿಸ್
- by Jagan Ramesh
- September 11, 2025
- 15 Views

ಬೆಂಗಳೂರು: ‘ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳು ಮತ್ತು ಸರ್ಕಾರದ ಅಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ-2022’ ಹಾಗೂ ಈ ಕಾಯ್ದೆ ಆಧರಿಸಿ ಬಿಬಿಎಂಪಿಯ 92 ಸಹಾಯಕ ಸಿವಿಲ್ ಇಂಜಿನಿಯರ್‌ಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2024ರ ಜುಲೈ 13ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಇದೇ ವೇಳೆ, ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಬಹುದು. ಆದರೆ, ನ್ಯಾಯಾಲಯದ ಅನುಮತಿಯಿಲ್ಲದೆ ನೇಮಕಾತಿಯ ಅಂತಿಮ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಕೆಪಿಎಸ್‌ಸಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಸಹಾಯಕ ಸಿವಿಲ್ ಇಂಜಿನಿಯರ್ ಹುದ್ದೆಗೆ ಅರ್ಹರಾಗಿರುವ ಬಿಇ ಸಿವಿಲ್ ಪದವೀಧರರಾದ ತುಮಕೂರು ಜಿಲ್ಲೆಯ ಎಚ್.ಆರ್. ಸಾಗರ್, ಮೈಸೂರಿನ ಡಿ.ಪ್ರಜ್ವಲ್ ಕುಮಾರ್ ಮತ್ತು ಜಿ.ಎಂ. ಪುರುಷೋತ್ತಮ ಗೌಡ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿತು.
ಜತೆಗೆ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕೆಪಿಎಸ್‌ಸಿ ಕಾರ್ಯದರ್ಶಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಮನವಿ ಏನು?
ಉಳಿಕೆ ಮೂಲ ವೃಂದದಲ್ಲಿ 92 ಸಹಾಯಕ ಸಿವಿಲ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ 41 ಹುದ್ದೆಗಳನ್ನು ಸಾಮಾನ್ಯ ವರ್ಗ ಹಾಗೂ 51 ಹುದ್ದೆಗಳನ್ನು ಮೀಸಲು ವರ್ಗಗಳಿಗೆ ನಿಗದಿಪಡಿಸಲಾಗಿದೆ. ಮೀಸಲು ಹುದ್ದೆಗಳ ಶೇಕಡಾವಾರು ಪ್ರಮಾಣ ಶೇ.56 ಆಗಲಿದ್ದು, ಸಾಮಾನ್ಯ ವರ್ಗಕ್ಕೆ ಶೇ.44 ಹುದ್ದೆಗಳನ್ನು ಮೀಸಲಿಟ್ಟಂತಾಗಲಿದೆ. ಇದರಿಂದ, ಮೀಸಲು ಹುದ್ದೆಗಳ ಒಟ್ಟಾರೆ ಪ್ರಮಾಣ ಶೇ.50 ಮೀರಬಾರದು ಎಂಬ ಸುಪ್ರೀಂಕೋರ್ಟ್ ಮಿತಿಯನ್ನು ದಾಟಿದೆ. ಆದ್ದರಿಂದ, ‘ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳು ಮತ್ತು ಸರ್ಕಾರದ ಅಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ-2022’ ಹಾಗೂ ಕಾಯ್ದೆಯನ್ನು ಸಂವಿಧಾನಬಾಹಿರವೆಂದು ಘೋಷಿಸಬೇಕು ಹಾಗೂ ಕೆಪಿಎಸ್‌ಸಿ ಹೊರಡಿಸಿರುವ ನೇಮಕಾತಿ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.
2022ರ ಕಾಯ್ದೆಯಡಿ ಎಸ್‌ಸಿ ವರ್ಗಗಳಿಗೆ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹಾಗೂ ಎಸ್‌ಟಿ ವರ್ಗಗಳಿಗೆ ಶೇ.3ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಇದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
Related Articles
Thank you for your comment. It is awaiting moderation.
Comments (0)