ಐಶ್ವರ್ಯಾ ಗೌಡ ಮಧ್ಯಂತರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಇಡಿಗೆ 2 ದಿನ ಕಾಲಾವಕಾಶ ‌ನೀಡಿದ ಹೈಕೋರ್ಟ್

ಬೆಂಗಳೂರು: ಹಣ‌ ಅಕ್ರಮ ವರ್ಗಾವಣೆ ಆರೋಪದಡಿ ಬಂಧನಕ್ಕೀಡಾಗಿರುವ ಐಶ್ವರ್ಯಾ ಗೌಡಗೆ ಮಧ್ಯಂತರ ಜಾಮೀನು ನೀಡುವ ಸಂಬಂಧ ಆಕ್ಷೇಪಣೆ ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಹೈಕೋರ್ಟ್ ಎರಡು ದಿನ ಕಾಲಾವಕಾಶ ನೀಡಿದೆ.

ಹಣ ಅಕ್ರಮ ವರ್ಗಾವಣೆ (ಪಿಎಂಎಲ್) ಕಾಯ್ದೆಯಡಿ ತಮ್ಮನ್ನು ಬಂಧಿಸಿರುವ ಇಡಿ ಕ್ರಮ‌‌ ಪ್ರಶ್ನಿಸಿ ಐಶ್ವರ್ಯಾ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ರಜಾಕಾಲದ ನ್ಯಾಯಪೀಠ ಮಂಗಳವಾರ ವಿಚಾರಣೆಗೆ ನಡೆಸಿತು.

ಐಶ್ವರ್ಯಾ ಪರ ವಕೀಲರು, ಬಂಧನ‌ ಪ್ರಕ್ರಿಯೆಯಲ್ಲಿ ಜಾರಿ ನಿರ್ದೇಶನಾಲಯ ನಿಯಮಗಳನ್ನು‌‌ ಪಾಲಿಸದ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.‌

ಇದಕ್ಕೆ ಆಕ್ಷೇಪಿಸಿದ ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಅರ್ಜಿದಾರರ ಮಧ್ಯಂತರ ಮನವಿಗೆ ಆಕ್ಷೇಪಣೆ ಸಲ್ಲಿಸಲು ತಮಗೆ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಮನವಿ ಪರಿಗಣಿಸಿ ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ ನ್ಯಾಯಪೀಠ, ಅಷ್ಟರೊಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಇಡಿಗೆ ಸೂಚಿಸಿತು.

ಕಾನೂನು ಪಾಲನೆಯಾಗಿಲ್ಲ:
ವಿಚಾರಣೆ ವೇಳೆ ಐಶ್ವರ್ಯಾ ಗೌಡ ಪರ ವಕೀಲರು, ಹಣ ಅಕ್ರಮ ವರ್ಗಾವಣೆ ಆರೋಪದಡಿ ಅರ್ಜಿದಾರರ ವಿರುದ್ಧ ಇಡಿ ತನಿಖಾಧಿಕಾರಿಗಳು ಮಾರ್ಚ್ 31ರಂದು ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 24ರಂದು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ, ಯಾವ ಆಧಾರದಲ್ಲಿ ಬಂಧನ ಮಾಡಲಾಗಿದೆ ಎಂಬ ಬಗ್ಗೆ ತನಿಖಾಧಿಕಾರಿಗಳು ಐಶ್ವರ್ಯಾ ಗೌಡರ ಸಂಬಂಧಿಕರು ಹಾಗೂ ಸ್ನೇಹಿತರಿಗೆ ತಿಳಿಸಿಲ್ಲ. ಬಂಧಿತರಿಂದ ಯಾವುದೇ ದಾಖಲೆ ವಶಪಡಿಸಿಕೊಂಡಿಲ್ಲ. ಆದರೂ, ಕಾನೂನಿಗೆ ವಿರುದ್ಧವಾಗಿ ಆಕೆಯ ಹೇಳಿಕೆ ದಾಖಲಿಸಿಕೊಂಡಿದೆ. ಬಂಧನಕ್ಕೆ ಕಾರಣ ನೀಡದೆ ಹೋದರೆ, ಅರ್ಜಿದಾರರು ನ್ಯಾಯಾಲಯದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಬಂಧನಕ್ಕೆ ಕಾರಣ ನೀಡದಿರುವುದು ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ. ಬಂಧನವೇ ಅಕ್ರಮ ಎಂದು ಕಂಡುಬಂದರೆ, ಒಂದು ಕ್ಷಣ ಸಹ ಆರೋಪಿಯನ್ನು ಬಂಧನಲ್ಲಿ ಮುಂದುವರಿಸಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಐಶ್ವರ್ಯಾ ಗೌಡ ಅವರಿಗೆ ಎರಡನೇ ತರಗತಿ ಓದುವ ಮಗುವಿದೆ. ಆ ಮಗುವನ್ನು ಪಾಲನೆ ಮಾಡಬೇಕಿರುವುದರಿಂದ ಮಧ್ಯಂತರ ಜಾಮೀನು ಮಂಜೂರು ಮಾಡಿ, ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಬೇಕು ಎಂದು ಕೋರಿದರು.

ಪ್ರಕರಣದ ಹಿನ್ನಲೆ:
ಮಾಜಿ ಸಂಸದ ಡಿ.ಕೆ.‌ಸುರೇಶ್ ಅವರ ಸಹೋದರಿ ಎಂದು‌ ಹೇಳಿಕೊಂಡು ಹಲವರಿಗೆ ಹಣ ಹಾಗೂ ಚಿನ್ನಾಭರಣ ಮೋಸ ಮಾಡಿದ ಹಾಗೂ ಸುಮಾರು 75 ಕೋಟಿ ರೂ. ಅಕ್ರಮ ವಹಿವಾಟು ನಡೆಸಿದ ಆರೋಪದ ಮೇಲೆ ಐಶ್ವರ್ಯಾ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ.

Related Articles

Comments (0)

Leave a Comment