ಅಕ್ರಮ ಗಣಿ ಗುತ್ತಿಗೆ ಪರವಾನಗಿ ಆರೋಪ; ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗೆ ನಿರ್ದೇಶನ ಕೋರಿದ್ದ ಪಿಐಎಲ್ ವಜಾ
- by Jagan Ramesh
- September 18, 2025
- 4 Views

ಬೆಂಗಳೂರು: ಅಕ್ರಮವಾಗಿ ಗಣಿ ಗುತ್ತಿಗೆ ಪರವಾನಗಿಗಳನ್ನು ನೀಡಿದ ಹಾಗೂ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನವೀಕರಣ ಮಾಡಿದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಭ್ರಷ್ಟಾಚಾರ ತಡೆ (ಪಿಸಿ) ಕಾಯ್ದೆಯಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಆದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ಉದ್ಯಮಿ ಎಂ.ಪಿ. ವೇಣುಗೋಪಾಲ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿತ್ತು.
ಅರ್ಜಿಯ ಸರತಿ ಬಂದಾಗ ಕೋರ್ಟ್ ಅಧಿಕಾರಿಗಳು ಎರಡು ಬಾರಿ ಪ್ರಕರಣವನ್ನು ಕರೆದರೂ, ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಮುಂದೆ ಹಾಜರಾಗಲಿಲ್ಲ. ಇದರಿಂದ ನ್ಯಾಯಪೀಠ, ಕಾನೂನು ಪ್ರಕ್ರಿಯೆ ಪಾಲಿಸದ ಆಧಾರದಲ್ಲಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಅರ್ಜಿಯ ವಿವರ:
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು. ಗಣಿ ಗುತ್ತಿಗೆಗಳ ಕಾನೂನುಬಾಹಿರ ನವೀಕರಣ ಸಂಬಂಧ ಸ್ವತಂತ್ರ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು. ಈ ವಿಚಾರವಾಗಿ ವರದಿ ನೀಡುವಂತೆ ಲೋಕಾಯುಕ್ತಕ್ಕೆ ಸೂಚಿಸಬೇಕು. ರಾಮಗಡ ಮಿನರಲ್ ಆ್ಯಂಡ್ ಮೈನಿಂಗ್ ಪ್ರೈ. ಲಿಮಿಟೆಡ್, ವೀರಭದ್ರಪ್ಪ ಸಂಗಪ್ಪ ಆ್ಯಂಡ್ ಕಂಪನಿಗಳಿಗೆ ನೀಡಲಾಗಿರುವ ಗಣಿ ಗುತ್ತಿಗೆ ರದ್ದುಪಡಿಸಬೇಕು. ಎಲ್ಲ ಗಣಿ ಗುತ್ತಿಗೆ ಪರವಾನಗಿಗಳನ್ನು ಕಾನೂನುಬಾಹಿರವೆಂದು ಘೋಷಿಸಬೇಕು. ಇದರಿಂದ, ಆಗಿರುವ ಆರ್ಥಿಕ ನಷ್ಟವನ್ನು ಅಕ್ರಮ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಅರ್ಜಿಯಲ್ಲಿ ಸಿದ್ದರಾಮಯ್ಯ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿಂದಿನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿ ಕೆಲ ಖಾಸಗಿ ಗಣಿ ಕಂಪನಿಗಳನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು.
Related Articles
Thank you for your comment. It is awaiting moderation.
Comments (0)