ಡಿಜೆ, ಸೌಂಡ್ ಸಿಸ್ಟಮ್ ಬಳಕೆಗೆ ನಿರ್ಬಂಧ; ಪೊಲೀಸರ ಸುತ್ತೋಲೆ ಪ್ರಶ್ನಿಸಿದ್ದ ಅರ್ಜಿ ವಜಾ
- by Ramya B T
- August 23, 2025
- 9 Views

ಬೆಂಗಳೂರು: ಗೌರಿ–ಗಣೇಶ ಹಬ್ಬ, ಈದ್ ಮಿಲಾದ್ ಮೆರವಣಿಗೆ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಡಿಜೆ ಹಾಗೂ ಸೌಂಡ್ ಸಿಸ್ಟಮ್ ಬಳಕೆ ನಿಷೇಧಿಸಿ ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪಶ್ಚಿಮ ವಿಭಾಗದ ಜಂಟಿ ಆಯುಕ್ತರು 2025ರ ಆಗಸ್ಟ್ 14ರಂದು ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ, ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘಟನೆಯ ಪದಾಧಿಕಾರಿ ಚಾಮರಾಜಪೇಟೆಯ ಶಂಕರ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಸೌಂಡ್ ಸಿಸ್ಟಮ್ ಮತ್ತು ಡಿಜೆ ನಿರ್ಬಂಧಿಸಿ ಬೆಂಗಳೂರು ಪೊಲೀಸರು ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ಲೋಪಗಳಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ವಸತಿ ಪ್ರದೇಶದಲ್ಲಿ ಶಬ್ದದ ಮಟ್ಟ ಹಗಲಿನ ವೇಳೆ 55 ಡೆಸಿಬಲ್ ಮತ್ತು ರಾತ್ರಿ ವೇಳೆ 45 ಡೆಸಿಬಲ್ ಮಟ್ಟಕ್ಕೆ ನಿರ್ಬಂಧಿಸಲಾಗಿದೆ. ಹೀಗಿರುವಾಗ ಸಾರ್ವಜನಿಕ ಡಿಜೆ ಮತ್ತು ಸೌಂಡ್ ಸಿಸ್ಟಮ್‌ನ ಬಳಕೆಯನ್ನು ಒಪ್ಪುವುದು ಕಷ್ಟಸಾಧ್ಯವೆಂದು ಹೇಳಿರುವ ನ್ಯಾಯಪೀಠ, ಹಬ್ಬದ ಸಂದರ್ಭಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರ ಆದೇಶದಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲವೆಂದು ತಿಳಿಸಿ, ಅರ್ಜಿ ವಜಾಗೊಳಿಸಿತು.
ಅರ್ಜಿದಾರರ ಆಕ್ಷೇಪವೇನು?
ಶಬ್ದ ಮಾಲಿನ್ಯ ನಿಯಮಗಳು–2000ಕ್ಕೆ ಅನುಗುಣವಾಗಿ ಮಾರ್ಗದರ್ಶಿ ಸೂತ್ರ ಹೆಣೆಯುವುದನ್ನು ಬಿಟ್ಟು ಈ ರೀತಿ ವ್ಯಾಪಕ ಕಾರ್ಯಾದೇಶ ಹೊರಡಿಸಿರುವುದು ಸಾಂವಿಧಾನಿಕವಾಗಿ ಕೊಡಮಾಡಿರುವ ನಮ್ಮ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಸೌಂಡ್ ಸಿಸ್ಟಮ್ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದೆ. ಆದರೆ, ಬಳಕೆಯನ್ನು ನಿರ್ಬಂಧಿಸುವುದು ಸಮಂಜಸ ಕ್ರಮವಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
Related Articles
Thank you for your comment. It is awaiting moderation.
Comments (0)