ಆಕ್ಷೇಪಾರ್ಹ ಹೇಳಿಕೆ; 3 ವಾರದಲ್ಲಿ ಗಿರೀಶ್ ಮಟ್ಟೆಣ್ಣವರ್ ವಿರುದ್ಧದ ದೂರಿನ ತನಿಖೆ ನಡೆಸಲು ಮಹಿಳಾ ಆಯೋಗಕ್ಕೆ ಹೈಕೋರ್ಟ್ ‌ನಿರ್ದೇಶನ

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ವಿವಾಹಗಳ ಕುರಿತು ಹಾಗೂ ಅಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಗಿರೀಶ್ ಮಟ್ಟೆಣ್ಣವರ್ ವಿರುದ್ಧ ಸಲ್ಲಿಸಲಾಗಿರುವ ದೂರಿನ ಸಂಬಂಧ ಮೂರು ವಾರಗಳಲ್ಲಿ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಬೆಂಗಳೂರಿನ ರಾಜಾಜಿನಗರ ನಿವಾಸಿ ಸಾಮಾಜಿಕ ಕಾರ್ಯಕರ್ತೆ ಕಾವೇರಿ ಕೇದಾರನಾಥ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿ ಅರ್ಜಿ ಮಾನ್ಯ ಮಾಡಿರುವ ನ್ಯಾಯಾಲಯ, ಅರ್ಜಿದಾರರು ಸಲ್ಲಿಸಿರುವ ದೂರು ಆಧರಿಸಿ ಗಿರೀಶ್ ಮಟ್ಟೆಣ್ಣವರ್ ವಿರುದ್ದ 3 ವಾರಗಳಲ್ಲಿ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗಕ್ಕೆ ನಿರ್ದೇಶನ ನೀಡಿತು. ಅರ್ಜಿದಾರರ ಪರ ಹಿರಿಯ ವಕೀಲ ಎಸ್. ರಾಜಶೇಖರ್ ವಾದ ಮಂಡಿಸಿದರು.

ಅರ್ಜಿದಾರರ ಮನವಿ:
ಗಿರೀಶ್ ಮಟ್ಟೆಣ್ಣವರ್ ನೀಡಿದ್ದ ಹೇಳಿಕೆ ವಿರುದ್ಧ 2025ರ ಆಗಸ್ಟ್ 29ರಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದ ಕಾವೇರಿ ಕೇದಾರನಾಥ ನೇತೃತ್ವದ ನಿಯೋಗ, ಮಟ್ಟೆಣ್ಣವರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ದೂರಿನ ಸಂಬಂಧ ಮಹಿಳಾ ಆಯೋಗದಿಂದ ಈವರೆಗೆ ಯಾವುದೇ ಕ್ರಮ ಆಗದ ಕಾರಣ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು.

Related Articles

Comments (0)

Leave a Comment