ಗುತ್ತಿಗೆ ಷರತ್ತು ಉಲ್ಲಂಘನೆ ಆರೋಪ; ಪರಿಶೀಲನೆ ನಡೆಸಲು ತುಮಕೂರು ತಹಶೀಲ್ದಾರ್‌ಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ತುಮಕೂರಿನ ಬೆಳಗುಂಬ ಗ್ರಾಮದಲ್ಲಿ ‘ಭಾರತೀಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಸೋಸಿಯೇಷನ್’ಗೆ ಗುತ್ತಿಗೆ ಆಧಾರದಲ್ಲಿ ಮಂಜೂರಾಗಿರುವ 2 ಎಕರೆ ಜಮೀನು ಬಳಕೆಗೆ ವಿಧಿಸಲಾಗಿದ್ದ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿದ ಆರೋಪ ಸಂಬಂಧ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ತಹಶೀಲ್ದಾರ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.

ಗುತ್ತಿಗೆ‌ ಷರತ್ತುಗಳನ್ನು ಉಲ್ಲಂಘಿಸಿ, ಜಮೀನಿನನಲ್ಲಿ ಸಮ್ಮೇಳನ ಸಭಾಂಗಣ ನಿರ್ಮಾಣಾಡಲಾಗುತ್ತಿದೆ ಎಂದು ಆರೋಪಿಸಿ ಬೆಳಗುಂಬ ಗ್ರಾಮದ ನಿವಾಸಿ ಬಿ.ಎಸ್. ವೆಂಕಟೇಶ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ತುಮಕೂರು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಒಂದೊಮ್ಮೆ ಅರ್ಜಿದಾರರು ಆರೋಪಿಸಿರುವಂತೆ ಗುತ್ತಿಗೆ ಆಧಾರದಲ್ಲಿ ಮಂಜೂರು ಆಗಿರುವ 2 ಎಕರೆ ಜಮೀನಿನ ಬಳಕೆಯಲ್ಲಿ ತುಮಕೂರಿನ ಭಾರತೀಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಸೋಸಿಯೇಷನ್ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿ, ವಾಣಿಜ್ಯ ಉದ್ದೇಶದಿಂದ ಆ ಜಾಗದಲ್ಲಿ ಸಮ್ಮೇಳನ ಸಭಾಂಗಣ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿದಾರರ ಆಕ್ಷೇಪವೇನು?
ತುಮಕೂರು ಭಾರತೀಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಸೋಸಿಯೇಷನ್‌ಗೆ 2013ರಲ್ಲಿ ಬೆಳಗುಂಬ ಗ್ರಾಮದ ಸರ್ವೇ ನಂಬರ್ 92ರಲ್ಲಿ 30 ವರ್ಷದ ಗುತ್ತಿಗೆ ಅವಧಿಗೆ ಜಿಲ್ಲಾಧಿಕಾರಿಗಳು ಜಮೀನು ಮಂಜೂರು ಮಾಡಿದ್ದರು. ಈ ವೇಳೆ ಜಮೀನನ್ನು ಯಾವ ಉದ್ದೇಶಕ್ಕೆ ಪಡೆದುಕೊಳ್ಳಲಾಗಿದೆ ಅದಕ್ಕೆ ಮಾತ್ರ ಬಳಕೆ ಮಾಡಬೇಕು, ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ಪ್ರತಿ 2 ವರ್ಷಗಳಿಗೆ ತಹಶೀಲ್ದಾರರು ಹೆಚ್ಚಿಸುವ ಶೇ.10 ಗುತ್ತಿಗೆ ದರ ಪಾವತಿಸಬೇಕು ಎಂದು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ, ಈ ಷರತ್ತುಗಳನ್ನು ಅಸೋಸಿಯೇಷನ್ ಉಲ್ಲಂಘಿಸಿದೆ. ಮಂಜೂರಾಗಿರುವ ಜಮೀನಿನಲ್ಲಿ ಅಸೋಸಿಯೇಷನ್‌ನ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಬದಲಿಗೆ ವಾಣಿಜ್ಯ ಉದ್ದೇಶದ ಸಮ್ಮೇಳನ ಸಭಾಂಗಣ ನಿರ್ಮಾಣ ಮಾಡಲಾಗುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

Related Articles

Comments (0)

Leave a Comment