ಬಾಲಕಿ ಕೊಲೆ ಆರೋಪಿ ಎನ್ಕೌಂಟರ್; ಸುಪ್ರೀಂಕೋರ್ಟ್ ಮಾರ್ಗಸೂಚಿ ಪಾಲನೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆಗೈದ ಆರೋಪ ಪ್ರಕರಣದಲ್ಲಿ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾಗಿದ್ದ ರಿತೇಶ್ ಕುಮಾರ್ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಇಬ್ಬರು ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ಮಾಡಿಸಿ, ತನಿಖೆಗೆ ನೆರವಾಗುವುದಕ್ಕಾಗಿ ದೇಹದ ಭಾಗಗಳ ಮಾದರಿ ಸಂಗ್ರಹಿಸಿಡಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.

ಬಾಲಕಿಯ ಕೊಲೆ ಮಾಡಿದ್ದನೆನ್ನಲಾದ ಆರೋಪಿಯು ಎನ್ಕೌಂಟರ್‌ಗೆ ಗುರಿಯಾಗಿ ಮೃತಪಟ್ಟಿದ್ದು, ಆತನ ಮೃತದೇಹ ಇಡೀ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯವಾಗಿದೆ. ಆದ್ದರಿಂದ, ಮೃತದೇಹವನ್ನು ದಹನ ಮಾಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮಾನವ ಹಕ್ಕುಗಳ ಪರ ಹೋರಾಡುತ್ತಿರುವ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ (ಪಿಯುಸಿಎಲ್‌) ಸಂಘಟನೆ ಹಾಗೂ ಡಾ. ಮಧು ಭೂಷಣ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಪೊಲೀಸ್‌ ಎನ್‌ಕೌಂಟರ್‌ನಲ್ಲಿ ವ್ಯಕ್ತಿಗಳು ಮೃತಪಟ್ಟ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ರೂಪಿಸಿರುವ ಮಾರ್ಗಸೂಚಿಗಳನ್ನು (ಪಿಯುಸಿಎಲ್‌ ಹಾಗೂ ಮಹಾರಾಷ್ಟ್ರ ಸರ್ಕಾರ ನಡುವಿನ ಪ್ರಕರಣ) ಪಾಲನೆ ಮಾಡಬೇಕು. ಅದರಂತೆ, ಮೃತನ ಮರಣೋತ್ತರ ಪರೀಕ್ಷೆಯನ್ನು ಜಿಲ್ಲಾ ಆಸ್ಪತ್ರೆಯ ಇಬ್ಬರು ವೈದ್ಯರ ತಂಡ ನಡೆಸಬೇಕು. ಇಡೀ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಿ, ಮಾದರಿಗಳನ್ನು ತನಿಖೆಗೆ ಸಹಕಾರಿಯಾಗುವಂತೆ ಸಂಗ್ರಹಿಸಿಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿತು. ಜತೆಗೆ, ಅರ್ಜಿಗೆ ವಿವರವಾದ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಏಪ್ರಿಲ್‌ 24ಕ್ಕೆ ಮುಂದೂಡಿತು.

ಶವ ದಹಿಸುವುದಿಲ್ಲ:
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಈ ರೀತಿಯ ಪ್ರಕರಣಗಳಲ್ಲಿ ಮೃತದೇಹವನ್ನು ದಹನ ಮಾಡುವುದಿಲ್ಲ. ಆದರೆ, ಮುಂದಿನ ತನಿಖೆಗೆ ನೆರವಾಗಬೇಕು ಎಂಬ ಕಾರಣದಿಂದ ಹೂಳಲಾಗುವುದು. ಆರು ತಿಂಗಳು ಕಳೆದ ಬಳಿಕವೂ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ವಿವರಿಸಿದರಲ್ಲದೆ, ಪ್ರಕರಣ ಸಂಬಂಧ ಈಗಾಗಲೇ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಮೃತದೇಹವನ್ನು ಕುಟುಂಬಸ್ಥರು ಗುರುತಿಸಿದ ಬಳಿಕ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ನ್ಯಾಯಪೀಠಕ್ಕೆ‌ ತಿಳಿಸಿದರು.

ಅರ್ಜಿದಾರರ ಮನವಿ ಏನು?
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಆದಿತ್ಯ ಸೋಂಧಿ, ಹುಬ್ಬಳ್ಳಿಯಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಆಧರಿಸಿ ಬಿಹಾರ ಮೂಲದ ಕೂಲಿ ಕಾರ್ಮಿಕ ರಿತೇಶ್‌ ಕುಮಾರ್‌ ಎಂಬಾತನನ್ನು ಬಂಧಿಸಲಾಗಿತ್ತು. ಅದೇ ದಿನ ಸಂಜೆ ಘಟನೆ ನಡೆದ 10 ಕಿಲೋ ಮೀಟರ್‌ ದೂರದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದನೆಂಬ ಕಾರಣ ನೀಡಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ವಿವರಿಸಿದರು.

ಪ್ರಕರಣ ಸಂಬಂಧ ಪ್ರಸ್ತುತ ರಾಜ್ಯ ಸರ್ಕಾರದ ಕ್ರಮ ಕುರಿತು ನಾವು ಚರ್ಚೆಗೆ ಮುಂದಾಗಿಲ್ಲ. ಆದರೆ, ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮಾರ್ಗಸೂಚಿಗಳು ಅನುಸರಿಸುವಂತಾಗಬೇಕು. ಮೃತ ಆರೋಪಿಯ ಶವಸಂಸ್ಕಾರ (ದಹನ) ಮಂಗಳವಾರ (ಏಪ್ರಿಲ್ 15) ನಡೆಸುವ ಸಾಧ್ಯತೆಯಿದೆ ಎಂದು ಗೊತ್ತಾಗಿದೆ. ಆದ್ದರಿಂದ, ಅದಕ್ಕೆ ತಡೆ ನೀಡಿ, ಮೃತ ದೇಹವನ್ನು ಸಾಕ್ಷ್ಯವನ್ನಾಗಿ ಸಂಗ್ರಹಿಸಿಡಬೇಕು ಎಂದು ಕೋರಿದರು.

Related Articles

Comments (0)

Leave a Comment