ರಿಕ್ಕಿ ರೈ ಕೊಲೆ ಯತ್ನ ಪ್ರಕರಣ; ಮುತ್ತಪ್ಪ ರೈ ಎರಡನೇ ಪತ್ನಿ ವಿರುದ್ಧ ಆತುರದ ಕ್ರಮ ಬೇಡವೆಂದ ಹೈಕೋರ್ಟ್

ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ಅವರ ವಿರುದ್ಧ ಮುಂದಿನ ವಿಚಾರಣೆವರೆಗೂ ಆತುರದ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ತನಿಖಾಧಿಕಾರಿಗಳಿಗೆ ಸೂಚಿಸಿದೆ.

ಕೊಲೆ ಯತ್ನ ಸಂಬಂಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಅನುರಾಧಾ ಮತ್ತಪ್ಪ ರೈ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿ, ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ವೆಂಕಟೇಶ್ ಎಸ್. ಅರಬಟ್ಟಿ ವಾದ ಮಂಡಿಸಿ, ಏಪ್ರಿಲ್ 18ರಂದು ನಡೆದ ಘಟನೆ ಸಂಬಂಧ ದಾಖಲಿಸಿರುವ ಎಫ್ಐಆರ್ ಹಾಗೂ ಆ ಕುರಿತಂತೆ ರಾಮನಗರದ ವಿಚಾರಣಾ ನ್ಯಾಯಾಲಯದ ಮುಂದಿರುವ ಪ್ರಕರಣದ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿದರಲ್ಲದೆ, ರಿಕ್ಕಿ ರೈ ಕೊಲೆ ಯತ್ನಕ್ಕೂ, ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ತನಿಖೆಗೆ ಅವರು ಎಲ್ಲ ರೀತಿಯಲ್ಲೂ ಸಹಕರಿಸಲು ಸಿದ್ಧರಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಮುತ್ತಪ್ಪ ರೈ ಮಕ್ಕಳು ಹಾಗೂ ಎರಡನೇ ಪತ್ನಿ ಅನುರಾಧಾ ಅವರ ಆಸ್ತಿಗಳಿಗೆ ಸಂಬಂಧಿಸಿದ ವಿಚಾರ ಕಳೆದ ಆರು ತಿಂಗಳ ಹಿಂದೆಯೇ ಇತ್ಯರ್ಥವಾಗಿದೆ. ಏಪ್ರಿಲ್‌ 14ರಂದು ಅರ್ಜಿದಾರರು ತಮ್ಮ ಪುತ್ರಿಯೊಂದಿಗೆ ಯೂರೋಪ್‌‌ಗೆ ತೆರಳಿದ್ದು, ಘಟನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಎಫ್ಐಆರ್‌ಗೆ ತಡೆ ನೀಡದಿದ್ದರೆ ತನಿಖೆ ಹೆಸರಿನಲ್ಲಿ ಅರ್ಜಿದಾರರು ಕಿರುಕುಳ ಅನುಭವಿಸುವ ಸಾಧ್ಯತೆ ಇದೆ ಆದ್ದರಿಂದ, ಎಫ್‌ಐಆರ್ ಹಾಗೂ ಪ್ರಕರಣಕ್ಕೆ ತಡೆ ನೀಡಬೇಕು ಎಂದು ಕೋರಿದರು.

ಪ್ರಕರಣವೇನು?
ಕಳೆದ ಶುಕ್ರವಾರ (ಏಪ್ರಿಲ್ 18) ರಿಕ್ಕಿ ರೈ ಕಾರಿನಲ್ಲಿ ಬಿಡದಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ರಿಕ್ಕಿ ರೈ ಕಾರು ಚಾಲಕ ಬಸವರಾಜು ಘಟನೆಯ ಬಗ್ಗೆ ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ರಾಕೇಶ್ ಮಲ್ಲಿ, ಅನುರಾಧಾ ರೈ, ನಿತೇಶ್ ಶೆಟ್ಟಿ ಮತ್ತು ವೈದ್ಯನಾಥನ್ ಅವರನ್ನು ಕ್ರಮವಾಗಿ ಒಂದರಿಂದ ನಾಲ್ಕು ಆರೋಪಿಗಳನ್ನಾಗಿ ಮಾಡಲಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಅನುರಾಧಾ ರೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Related Articles

Comments (0)

Leave a Comment