ಹಿಂಡಲಗಾ ಜೈಲಿಗೆ ಸ್ಥಳಾಂತರ ಪ್ರಶ್ನಿಸಿ ಪ್ರದೋಷ್ ಅರ್ಜಿ; ಸೆ.11ಕ್ಕೆ ವಿಚಾರಣೆ ನಿಗದಿಪಡಿಸಿದ ಹೈಕೋರ್ಟ್

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವುದಕ್ಕೆ ಆಕ್ಷೇಪಿಸಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಷ್ ಎಸ್. ರಾವ್ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಸೆಪ್ಟೆಂಬರ್ 11ಕ್ಕೆ ವಿಚಾರಣೆಗೆ ನಿಗದಿಪಡಿಸಿದೆ.

ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಪ್ರದೋಷ್ ಪರ ವಕೀಲ ಹಿತೇಶ್ ಗೌಡ ಬಿ.ಜೆ. ಹಾಜರಾಗಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆರೋಪಿಗಳಿಗೆ ವಿಶೇಷ ಆತಿಥ್ಯ ಕಲ್ಪಿಸಿದ ಆರೋಪದ ಹಿನ್ನೆಲೆಯಲ್ಲಿ ಅರ್ಜಿದಾರರನ್ನು ಬೆಳಗಾವಿಯ ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ಇಡೀ ಪ್ರಕರಣದಲ್ಲಿ ಅರ್ಜಿದಾರರ ಪಾತ್ರವಿಲ್ಲ. ಆದ್ದರಿಂದ, ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಿಸಲು ಅವಕಾಶ ಮಾಡಿಕೊಡಬೇಕು ಎಂದರು.

ಆಗ ನ್ಯಾಯಪೀಠ, ದರ್ಶನ್ ಸ್ಥಳಾಂತರ (ಬಳ್ಳಾರಿ) ಮಾಡಿರುವುದನ್ನೂ ಪ್ರಶ್ನೆ ಮಾಡಲಾಗಿದೆಯೇ? ಎಂದು ಪ್ರಶ್ನಿಸಿತು. ಇದಕ್ಕುತ್ತರಿಸಿದ ವಕೀಲರು, ಪ್ರದೋಷ್ ರಾವ್ ಅವರ ಸ್ಥಳಾಂತರ ಮಾತ್ರ ಪ್ರಶ್ನೆ ಮಾಡಲಾಗಿದೆ ಎಂದರು. ಅದಕ್ಕೆ ನ್ಯಾಯಪೀಠ, ನೀವು ಇಲ್ಲೇ (ಪರಪ್ಪನ ಅಗ್ರಹಾರ) ಇರಬೇಕಾ? ಎಂದು ಕೇಳಿತು.

ಪ್ರದೋಷ್ ಪರ ವಕೀಲರು, ಅರ್ಜಿದಾರರು ಬೆಂಗಳೂರು ಕಾರಾಗೃಹದಲ್ಲೇ ಏಕೆ ಇರಬೇಕು ಎಂಬುದನ್ನು ಸಮರ್ಥಿಸಿಕೊಳ್ಳಲು ನಮ್ಮ ಬಳಿ ಸಾಕಷ್ಟು ವಿಚಾರಗಳಿವೆ. ಈಗಾಗಲೇ ಅರ್ಜಿದಾರರನ್ನು ಸ್ಥಳಾಂತರಿಸಲಾಗಿದೆ. ಇಡೀ ಪ್ರಕರಣದಲ್ಲಿ ಪ್ರದೋಷ್ ಪಾತ್ರ ಇಲ್ಲ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ವಿಶೇಷ ಆತಿಥ್ಯ ನೀಡಿರುವುದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿದೆ. ಇದರಲ್ಲಿ ಪ್ರದೋಷ್ ಪಾತ್ರವಿಲ್ಲ ಎಂದರು. ಇದನ್ನು ಆಲಿಸಿದ ಪೀಠ, ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿತು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ಕಲ್ಪಿಸಿದ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದರ್ಶನ್ ಸೇರಿ 10 ಆರೋಪಿಗಳನ್ನು ಮೈಸೂರು, ವಿಜಯಪುರ, ಬಳ್ಳಾರಿ, ಕಲಬುರ್ಗಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲಾ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ಪರಪ್ಪನ ಅಗ್ರಹಾರದ ಮೇಲ್ವಿಚಾರಕರು ಸೇರಿ ಒಂಭತ್ತು ಅಧಿಕಾರಿಗಳನ್ನೂ ಅಮಾನತು ಮಾಡಲಾಗಿದ್ದು, ಮೂರು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.

ಆರೋಪಿಗಳಿಬ್ಬರಿಗೆ ಬೇಲ್ ನಿರಾಕರಿಸಿದ ಸೆಷನ್ಸ್ ಕೋರ್ಟ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಕೇಶವಮೂರ್ತಿ ಮತ್ತು ವಿನಯ್‌ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ವಜಾಗೊಳಿಸಿದೆ.

ಜಾಮೀನು ಕೋರಿ ಕೇಶವಮೂರ್ತಿ ಮತ್ತು ವಿನಯ್‌ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ನ್ಯಾಯಾಧೀಶರಾದ ಜೈಶಂಕರ್‌ ವಜಾಗೊಳಿಸಿದ್ದಾರೆ. ಇದೇ ಪ್ರಕರಣದ ಇತರ ಆರೋಪಿಗಳಾದ ನಟಿ ಪವಿತ್ರಾಗೌಡ ಮತ್ತು ಅನುಕುಮಾರ್‌ ಅವರ ಜಾಮೀನು ಅರ್ಜಿಗಳನ್ನೂ ನ್ಯಾಯಾಲಯ ಆಗಸ್ಟ್ 31ರಂದು ತಿರಸ್ಕರಿಸಿತ್ತು.

ಪ್ರಕರಣದ ಸಾಕ್ಷ್ಯ ನಾಶಪಡಿಸಲು ನೇರವಾಗಿ ಭಾಗಿಯಾದ ಆರೋಪ ಕೇಶವಮೂರ್ತಿ ಮೇಲಿದೆ. ಆತನ ವಿರುದ್ಧ ಇತರ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಕೇಶವಮೂರ್ತಿ ಇತರ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದು, ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ. ಇನ್ನು ಕೊಲೆ ಪ್ರಕರಣದಲ್ಲಿ ವಿನಯ್‌ ಪಾತ್ರ ಇರುವ ಬಗ್ಗೆ ಪ್ರತ್ಯಕ್ಷದರ್ಶಿಯ ಸಾಕ್ಷ್ಯವಿದೆ. ಪ್ರತ್ಯಕ್ಷದರ್ಶಿಯ ಪ್ರಮಾಣಿಕೃತ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಳ್ಳಬೇಕಿದ್ದು, ಜಾಮೀನು ನೀಡಿದರೆ ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ. ಸಾಕ್ಷ್ಯಾಧಾರಗಳ ನಾಶಕ್ಕೆ ಯತ್ನಿಸಬಹುದು. ಆದ್ದರಿಂದ, ಈ ಹಂತದಲ್ಲಿ ಜಾಮೀನು ಪಡೆಯಲು ಆರೋಪಿಗಳು ಅರ್ಹರಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

Related Articles

Comments (0)

Leave a Comment