ಅಕ್ರಮ ಗಣಿ ಗುತ್ತಿಗೆ ಪರವಾನಗಿ ಆರೋಪ; ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗೆ ನಿರ್ದೇಶನ ಕೋರಿದ್ದ ಅರ್ಜಿ ಮುಂದೂಡಿದ ಹೈಕೋರ್ಟ್
- by Prashanth Basavapatna
- February 13, 2026
- 9 Views
ಬೆಂಗಳೂರು: ಅಕ್ರಮವಾಗಿ ಗಣಿ ಗುತ್ತಿಗೆ ಪರವಾನಗಿಗಳನ್ನು ನೀಡಿದ ಹಾಗೂ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನವೀಕರಣ ಮಾಡಿದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಭ್ರಷ್ಟಾಚಾರ ತಡೆ (ಪಿಸಿ) ಕಾಯ್ದೆಯಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಆದೇಶಿಸುವಂತೆ ಹಾಗೂ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಪ್ರಿಲ್ 17ಕ್ಕೆ ಮುಂದೂಡಿದೆ.
ಬೆಂಗಳೂರಿನ ಉದ್ಯಮಿ ಎಂ.ಪಿ. ವೇಣುಗೋಪಾಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ಅರ್ಜಿದಾರರ ಪರ ವಕೀಲರು ವಿಚಾರಣೆಗೆ ಸತತ ಗೈರಾದ ಹಿನ್ನೆಲೆಯಲ್ಲಿ ಈ ಹಿಂದೆ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಅರ್ಜಿದಾರರ ವಕೀಲರ ಮನವಿಯಂತೆ ಅರ್ಜಿಯನ್ನು ವಿಚಾರಣೆಗೆ ಮರು ಪರಿಗಣಿಸಲಾಗಿದೆ. ಆದರೆ, ಐದಾರು ಬಾರಿ ಕಾಲಾವಕಾಶ ಕೇಳಿದ್ದಾರೆ, ಈ ದಿನವೂ ಮತ್ತೆ ಕಾಲಾವಕಾಶ ಕೇಳುತ್ತಿದ್ದಾರೆ ಎಂದರು.
ಮುಂದುವರಿದು, ಇದೇ ವಿಚಾರವಾಗಿ ಈ ಹಿಂದೆ ರಾಮಮೂರ್ತಿ ಗೌಡ ಎಂಬುವರು ಖಾಸಗಿ ದೂರು (ಪಿಸಿಆರ್) ಸಲ್ಲಿಸಿದ್ದರು. ಆ ಖಾಸಗಿ ದೂರಿನಲ್ಲಿದ್ದ ವಿಷಯ ಮತ್ತು ಅಂಶಗಳನ್ನೇ ಪುಟ ಸಂಖ್ಯೆಗಳ ಸಮೇತ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನಕಲು ಮಾಡಲಾಗಿದೆ. ಆ ಖಾಸಗಿ ದೂರಿನಲ್ಲೂ ಸಿದ್ದರಾಮಯ್ಯ ಸೇರಿ ಈಗಿನ ಪಿಐಎಲ್‌ನಲ್ಲಿರುವ ಎಲ್ಲರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ಖಾಸಗಿ ದೂರಿನ ಅಂಶಗಳನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನಕಲು ಮಾಡಲಾಗಿದೆ ಎಂದು ಸಿಎಂ ಪರ ವಕೀಲರು ಹೇಳುತ್ತಿದ್ದಾರೆ. ಆದ್ದರಿಂದ, ಖಾಸಗಿ ದೂರಿನ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲೇನಿದೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು. ಗಣಿ ಗುತ್ತಿಗೆಗಳ ಕಾನೂನುಬಾಹಿರ ನವೀಕರಣ ಸಂಬಂಧ ಸ್ವತಂತ್ರ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು. ಈ ವಿಚಾರವಾಗಿ ವರದಿ ನೀಡುವಂತೆ ಲೋಕಾಯುಕ್ತಕ್ಕೆ ಸೂಚಿಸಬೇಕು. ರಾಮಗಡ ಮಿನರಲ್ ಆ್ಯಂಡ್ ಮೈನಿಂಗ್ ಪ್ರೈ. ಲಿಮಿಟೆಡ್, ವೀರಭದ್ರಪ್ಪ ಸಂಗಪ್ಪ ಆ್ಯಂಡ್ ಕಂಪನಿಗಳಿಗೆ ನೀಡಲಾಗಿರುವ ಗಣಿ ಗುತ್ತಿಗೆ ರದ್ದುಪಡಿಸಬೇಕು. ಎಲ್ಲ ಗಣಿ ಗುತ್ತಿಗೆ ಪರವಾನಗಿಗಳನ್ನು ಕಾನೂನುಬಾಹಿರವೆಂದು ಘೋಷಿಸಬೇಕು. ಇದರಿಂದ, ಆಗಿರುವ ಆರ್ಥಿಕ ನಷ್ಟವನ್ನು ಅಕ್ರಮ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಸಿಎಂ ಸಿದ್ದರಾಮಯ್ಯ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿಂದಿನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿ ಕೆಲ ಖಾಸಗಿ ಗಣಿ ಕಂಪನಿಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.
Related Articles
Thank you for your comment. It is awaiting moderation.


Comments (0)