ಚಿನ್ನದ ಸಾಲ ನೀಡುವ ಕಂಪನಿಗಳು ಕದ್ದ ಚಿನ್ನವನ್ನು ಅಡಮಾನವಿರಿಸಿಕೊಳ್ಳಲಾಗದು; ಹೈಕೋರ್ಟ್ ಆದೇಶ
- by Prashanth Basavapatna
- February 13, 2026
- 8 Views
ಬೆಂಗಳೂರು: ಕದ್ದ ಆಸ್ತಿ ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಪೊಲೀಸರು ಕೇಳಿದಾಗ ಅದನ್ನು ಹಸ್ತಾಂತರ ಮಾಡಲು ವಿಳಂಬಿಸುವ ಅಥವಾ ನಿರಾಕರಿಸುವ ಯಾವುದೇ ಕಾನೂನುಬದ್ಧ ಹಕ್ಕು ಹೊಂದಿರುವುದಿಲ್ಲ, ಚಿನ್ನದ ಸಾಲ ನೀಡುವ ಕಂಪನಿಯಾಗಿದ್ದರೂ ಸಹ ಬಡ್ಡಿ ಮತ್ತು ಭದ್ರತೆಯ ಕಾರಣ ನೀಡಿ ಕದ್ದ ವಸ್ತುಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕೆಂಗೇರಿಯ ಕರೂರು ವೈಶ್ಯ ಬ್ಯಾಂಕ್ ಶಾಖೆಯಿಂದ ಕದ್ದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಮಂಜೂರು ಮಾಡಿದ್ದ ಆರೋಪದಲ್ಲಿ ಕದ್ದ ಒಡವೆಗಳನ್ನು ಒಪ್ಪಿಸುವಂತೆ ಕೆಂಗೇರಿ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಐಐಎಫ್ಎಲ್ ಫೈನಾನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ಹಣಕಾಸುದಾರರ ಯಾವುದೇ ಭದ್ರತಾ ಹಿತಾಸಕ್ತಿ ಒಪ್ಪಂದದ ಪ್ರಕಾರ ಮಾನ್ಯವಾಗಿದ್ದರೂ ಸಹ ಕದ್ದ ಆಸ್ತಿಯ ನಿಜವಾದ ಮಾಲೀಕರ ಉನ್ನತ ಹಕ್ಕುಗಳನ್ನು ಅತಿಕ್ರಮಿಸಲು ಅಥವಾ ತನಿಖೆಗೆ ಅಡ್ಡಿಪಡಿಸಲು ಸಾಧ್ಯವಿಲ್ಲ. ಒಡವೆಗಳನ್ನು ಹಿಂದಿರುಗಿಸಿದಲ್ಲಿ ತನಗೆ ಆರ್ಥಿಕವಾಗಿ ನಷ್ಟವಾಗಲಿದೆ ಎಂಬ ಕಾರಣ ನೀಡಿ ಅಂತಹ ವಸ್ತುಗಳನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆಯುವುದನ್ನು ವಿರೋಧಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್‌ಎಸ್) 2023ರ ಸೆಕ್ಷನ್ 94(1)ರ ಅಡಿಯಲ್ಲಿ ಚಿನ್ನದ ವಸ್ತುಗಳು “ಇತರ ವಿಷಯ”ದ ವ್ಯಾಪ್ತಿಗೆ ಬರುತ್ತವೆ. ಕದ್ದ ಒಡವೆಗಳನ್ನು ಹೊಂದಿದ್ದಾರೆ ಎಂದು ನಂಬಲಾದ ಯಾವುದೇ ವ್ಯಕ್ತಿಗಳಿಗೆ ಅವುಗಳನ್ನು ಒಪ್ಪಿಸಲು ಒತ್ತಾಯಿಸಿ ನೋಟಿಸ್‌ಗಳನ್ನು ಹೊರಡಿಸುವ ಅಧಿಕಾರ ತನಿಖಾಧಿಕಾರಿಗಳು ಹೊಂದಿದ್ದಾರೆ ಎಂದು ನ್ಯಾಯಪೀಠ ಆದೇಶಿಸಿದೆ.
ಅರ್ಜಿದಾರ ಕಂಪನಿಯ ಮನವಿ ಪುರಸ್ಕರಿಸಲು ಯಾವುದೇ ಬಲವಾದ ಕಾರಣಗಳು ಲಭ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಚಿನ್ನದ ಆಭರಣಗಳನ್ನು ಕಂಪನಿಯು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು. ಆ ಒಡವೆಗಳು ಕರೂರು ವೈಶ್ಯ ಬ್ಯಾಂಕ್ ಕೆಂಗೇರಿ ಶಾಖೆಯಿಂದ ಕಳವು ಮಾಡಲಾಗಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿ, ಅದು ಸಾಬೀತಾದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಹೇಳಿದೆ.
ಕಂಪನಿಯ ವಾದವೇನು?
ವಿಚಾರಣೆ ವೇಳೆ ವಾದ ಮಂಡಿಸಿದ್ದ ಐಐಎಫ್‌ಎಲ್ ಫೈನಾನ್ಸ್ ಕಂಪನಿ ಪರ ವಕೀಲರು, ಚಿನ್ನವನ್ನು ಉತ್ತಮ ನಂಬಿಕೆಯಿಂದ ಸ್ವೀಕರಿಸಿದೆ ಮತ್ತು ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರ ಸಾಲಗಳನ್ನು ವಿತರಿಸಲಾಗಿದೆ. ಒಪ್ಪಂದದ ಬಾಧ್ಯತೆಗಳು ಅಡವಿಟ್ಟ ಚಿನ್ನವನ್ನು ಬಿಟ್ಟುಕೊಡುವುದನ್ನು ತಡೆಯುತ್ತಿದ್ದವು. ಆದರೆ, ಚಿನ್ನವನ್ನು ವಶಪಡಿಸಿಕೊಳ್ಳದೆ ತನಿಖೆಗೆ ಸಹಕರಿಸಲು ಸಾಧ್ಯವಿದೆ ಎಂದಿದ್ದರು.
ಕರೂರು ವೈಶ್ಯ ಬ್ಯಾಂಕ್ ಪರ ವಕೀಲರು ವಾದ ಮಂಡಿಸಿ, ಕಳುವಾಗಿರುವ ಚಿನ್ನವನ್ನು ಸಾಲ ಪಡೆದ ಗ್ರಾಹಕರಿಗೆ ಹಿಂದಿರುಗಿಸುವುದು ತನ್ನ ಕಾನೂನುಬದ್ಧ ಕರ್ತವ್ಯ ಎಂದು ತಿಳಿಸಿದ್ದರು. ಸರ್ಕಾರದ ಪರ ವಕೀಲರು, ಐಐಎಫ್ಎಲ್ ಕಂಪನಿಯಲ್ಲಿ ಅಡಮಾನ ಇಡಲಾಗಿರುವ ಚಿನ್ನವನ್ನು ಬ್ಯಾಂಕ್‌ನ ಅಧಿಕಾರಿಯೇ ಕದ್ದಿದ್ದಾರೆನ್ನಲಾಗಿದೆ. ಆದ್ದರಿಂದ, ತನಿಖೆ ಮುಂದುವರಿಯಬೇಕು ಎಂದು ವಾದಿಸಿದ್ದರು.
ಪ್ರಕರಣವೇನು?
ಕರೂರು ವೈಶ್ಯ ಬ್ಯಾಂಕ್‌ನ ಕೆಂಗೇರಿ ಶಾಖೆಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು 2022ರಿಂದ ಸಹಾಯಕ ವ್ಯವಸ್ಥಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2025ರ ಅಕ್ಟೋಬರ್ ತಿಂಗಳಲ್ಲಿ ನಡೆದ ಅನಿರೀಕ್ಷಿತ ಮರು ಮೌಲ್ಯಮಾಪನದ ಸಮಯದಲ್ಲಿ ಸಹಾಯಕ ವ್ಯವಸ್ಥಾಪಕಿ ನಿರ್ವಹಿಸುವ ಚಿನ್ನದ ಸಾಲ ಖಾತೆಗಳ ಸಂಬಂಧ ಗಂಭೀರ ಅಕ್ರಮಗಳು ಪತ್ತೆಯಾಗಿದ್ದವು.
ಈ ಕುರಿತು ಪರಿಶೀಲನೆ ನಡೆಸಿದಾಗ, ಗ್ರಾಹಕರು ಅಡವಿಟ್ಟಿದ್ದ ನಿಜವಾದ ಚಿನ್ನಾಭರಣಗಳನ್ನು ರಹಸ್ಯವಾಗಿ ತೆಗೆದು ನಕಲಿ ವಸ್ತುಗಳೊಂದಿಗೆ ಬದಲಾಯಿಸುವ ಮೂಲಕ ಕಳ್ಳತನ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹಕ್ಕೆ ಸಮನಾದ ಕೃತ್ಯಗಳಲ್ಲಿ ಅವರು ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿತ್ತಲ್ಲದೆ, ಕದ್ದ ಒಡವೆಗಳನ್ನು ಐಐಎಫ್ಎಲ್ ಫೈನಾನ್ಸ್ ಕಂಪನಿ ಸೇರಿ ವಿವಿಧೆಡೆಗಳಲ್ಲಿ ಅಡವಿಟ್ಟು ಸಾಲ ಪಡೆದುಕೊಂಡಿದ್ದ ಆರೋಪವಿತ್ತು.
ಈ ಸಂಬಂಧ ಕರೂರು ವೈಶ್ಯ ಬ್ಯಾಂಕ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಫೈನಾನ್ಸ್ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದರು. ಇದರಿಂದ, ನೋಟಿಸ್ ರದ್ದು ಕೋರಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.
Related Articles
Thank you for your comment. It is awaiting moderation.


Comments (0)