- ಪ್ರಮುಖ ಸಮಾಚಾರಗಳು
- ಹೈಕೋರ್ಟ್
- Like this post: 20
ಅಂಗವಿಕಲರ ನೇಮಕಾತಿಯಲ್ಲಿ ವೈದ್ಯಕೀಯ ಪ್ರಮಾಣಪತ್ರದ ಜತೆಗೆ ಕ್ರಿಯಾತ್ಮಕ ಮೌಲ್ಯಮಾಪನವನ್ನೂ ಮಾಡಬೇಕು – ಹೈಕೋರ್ಟ್
- by Jagan Ramesh
- May 19, 2025
- 179 Views

ಬೆಂಗಳೂರು: ಅಂಗವಿಕಲರ ಕೋಟಾದಡಿಯ ನೇಮಕಾತಿ ಪ್ರಕ್ರಿಯೆಗಳಲ್ಲಿ ವೈದ್ಯಕೀಯ ಪ್ರಮಾಣಪತ್ರಗಳನ್ನಷ್ಟೇ ಅಲ್ಲದೆ ಅಭ್ಯರ್ಥಿಗಳ ಕ್ರಿಯಾತ್ಮಕತೆಯನ್ನೂ ಮೌಲ್ಯಮಾಪನ ಮಾಡಬೇಕು ಎಂದಿರುವ ಹೈಕೋರ್ಟ್, ಶೇ. 75 ಅಂಗವೈಕಲ್ಯಕ್ಕೆ ತುತ್ತಾಗಿರುವ ವ್ಯಕ್ತಿಯೊಬ್ಬರಿಗೆ ಸಹಾಯಕ ಲೆಕ್ಕಾಧಿಕಾರಿ ಹುದ್ದೆ ನೀಡುವಂತೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮಕ್ಕೆ (ಕೆಪಿಟಿಸಿಎಲ್) ನಿರ್ದೇಶಿಸಿದೆ.
ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ತಮ್ಮನ್ನು ನೇಮಕ ಮಾಡಲು ನಿರ್ದೇಶಿಸುವಂತೆ ಕೋರಿ ಕೆಪಿಟಿಸಿಎಲ್‌ನಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಅನಿಲ್ ಕುಮಾರ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಮೇಲ್ಮನವಿದಾರರು ಅಂಗವಿಕಲರಾಗಿದ್ದರೂ, ಕುಳಿತುಕೊಳ್ಳುವುದು, ಕೈಗಳಿಂದ ಬರೆಯುವುದು, ಎರಡೂ ಕೈಗಳಿಂದ ಸಾಮಾನ್ಯ ಕೆಲಸಗಳನ್ನು ಮಾಡುವುದು ಸೇರಿ ಹಗುರವಾದ ಕರ್ವ್ಯಗಳನ್ನು ನಿರ್ವಹಿಸಲು ಸಮರ್ಥರಾಗಿದ್ದಾರೆ. ಈ ಎಲ್ಲ ಕ್ರಿಯಾತ್ಮಕ ಮೌಲ್ಯಮಾಪನದ ಅನುಸಾರ ಅವರು ಸಹಾಯಕ ಲೆಕ್ಕಾಧಿಕಾರಿಯಾಗಿ ನೇಮಕವಾಗಲು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಅಂಗವಿಕಲರ ವಿಚಾರದಲ್ಲಿ ಅರ್ಹತೆಯ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ವೈದ್ಯಕೀಯ ಪ್ರಮಾಣಪತ್ರವನ್ನು ಮಾತ್ರ ಆಧರಿಸಬಾರದು. ಬದಲಿಗೆ ಅಭ್ಯರ್ಥಿಗಳ ಕ್ರಿಯಾತ್ಮಕತೆಯ ಮೌಲ್ಯಮಾಪನವನ್ನೂ ಆಧರಿಸಿರಬೇಕು, ಜತೆಗೆ, ಅಂಗಲವಿಕರ ಕೋಟಾದಡಿ ನೇಮಕ ಮಾಡುವುದಕ್ಕೆ ಪರ್ಯಾಯ ಅಭ್ಯರ್ಥಿಗಳು ಇಲ್ಲದಿದ್ದಲ್ಲಿ, ಮಾನದಂಡಗಳನ್ನು ಸಡಿಲಿಸಿ, ಅರ್ಜಿ ಸಲ್ಲಿಸಿರುವವರನ್ನೇ ಆಯ್ಕೆ ಮಾಡಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದ್ದರಿಂದ, ಅರ್ಜಿದಾರರನ್ನು ಸಹಾಯಕ ಲೆಕ್ಕಾಧಿಕಾರಿಯನ್ನಾಗಿ ನೇಮಕ ಮಾಡಬೇಕು ಎಂದು ನ್ಯಾಯಪೀಠ ಕೆಪಿಟಿಸಿಎಲ್‌ಗೆ ನಿರ್ದೇಶಿಸಿದೆ.
ಮೇಲ್ಮನವಿದಾರರು ಶೇ.75 ಪ್ರಮಾಣದಲ್ಲಿ ಅಂಗವಿಕಲರಾಗಿದ್ದು, ಪ್ರಸ್ತುತ ಕೆಪಿಟಿಸಿಎಲ್‌ನಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹಾಯಕ ಮತ್ತು ಸಹಾಯಕ ಲೆಕ್ಕಾಧಿಕಾರಿ ನಿರ್ವಹಣೆ ಮಾಡುವ ಕಾರ್ಯಗಳು ಬಹುತೇಕ ಒಂದೇ ಸ್ವರೂಪದ್ದಾಗಿರಲಿದೆ. ಅವರು ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಬಡ್ತಿ ಪಡೆಯಲು ಸಂಪೂರ್ಣ ಅರ್ಹರಿದ್ದಾರೆ. ಆದ್ದರಿಂದ, ಅವರನ್ನು ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ನೇರ ನೇಮಕಾತಿ ಮೂಲಕ ಅನರ್ಹರು ಎಂದು ಘೋಷಿಸುವುದು ಅಸಮಂಜಸವಾಗಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?
ಅನಿಲ್ ಕುಮಾರ್ ಅವರು 2015ರ ಮಾರ್ಚ್ 7ರಂದು ಹೊರಡಿಸಿದ್ದ ಅಧಿಸೂಚನೆಯಂತೆ ಕೆಪಿಟಿಸಿಎಲ್‌ನಲ್ಲಿ ಸಹಾಯಕರಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಕೆಪಿಟಿಸಿಎಲ್ 2016ರ ಸೆಪ್ಟಂಬರ್ 8ರಂದು ಸಹಾಯಕ ಲೆಕ್ಕಾಧಿಕಾರಿ ಹುದ್ದೆ ಸೇರಿ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿಗಳನ್ನು ಅಹ್ವಾನಿಸಿತ್ತು.
ಶೇ.75 ಪ್ರಮಾಣದ ಅಂಗವಿಕಲರಾಗಿದ್ದ ಮೇಲ್ಮನವಿದಾರ ಅನಿಲ್ ಕುಮಾರ್ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಅಂಕವಿಕಲರ ಕೋಟಾ ಅಡಿ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಆಯ್ಕೆಯ ತಾತ್ಕಾಲಿಕ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಅಂಗವಿಕಲರ ವರ್ಗದಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಾಗಿಲ್ಲ ಎಂದು ಕೆಪಿಟಿಸಿಎಲ್ ಕಾರಣ ನೀಡಿತ್ತು.
ನಿಗಮದ ಈ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅನಿಲ್, ತಾವು ಶೇ.75ರಷ್ಟು ಅಂಗವಿಕಲರಾಗಿದ್ದು, ತಮ್ಮನ್ನು ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ನೇಮಕ ಮಾಡಲು ನಿರ್ದೇಶಿಸುವಂತೆ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು ಅರ್ಹರಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಅನಿಲ್ ಕುಮಾರ್, ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
Related Articles
Thank you for your comment. It is awaiting moderation.
Comments (0)