ನ್ಯಾಯಾಲಯ ಸಂಕೀರ್ಣಕ್ಕೆ ಮಂಜೂರಾಗಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದೇ?; ಸರ್ಕಾರದಿಂದ ವಿವರ ಕೇಳಿದ ಹೈಕೋರ್ಟ್

ಬೆಂಗಳೂರು: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಮಂಜೂರು ಮಾಡಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದೇ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಶ್ರೀನಿವಾಸಪುರ ತಾಲೂಕಿನ ಪಾತಪಲ್ಲಿಯ ಸಿ. ಶ್ರೀನಿವಾಸರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು‌.

ಅರ್ಜಿದಾರರ ಪರ ವಕೀಲರು, ಕಲ್ಲೂರು ಗ್ರಾಮದ ಸರ್ವೇ ನಂಬರ್‌ 31 ಅರಣ್ಯ ಇಲಾಖೆಗೆ ಸೇರಿದ ಭೂಮಿ ಇದೆ. ಆದರೆ, ಅದರಲ್ಲಿ ಐದು ಎಕರೆ ಜಾಗವನ್ನು ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಆ ಮೂಲಕ ಅರಣ್ಯ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದರು.

ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಈಗಾಗಲೇ ನ್ಯಾಯಾಲಯ ಸಂಕೀರ್ಣ ಕಾಮಗಾರಿ ನಡೆದಿದ್ದು, ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಅರ್ಜಿದಾರರು ಪ್ರಸ್ತಾಪಿಸಿರುವ ಅಂಶದ ಬಗ್ಗೆ ಪರಿಶೀಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನು ಆಲಿಸಿದ ನ್ಯಾಯಪೀಠ, ವಿವಾದಿತ ಭೂಮಿಯು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಆದ್ದರಿಂದ, ಆ ಭೂಮಿ ನಿಜವಾಗಿಯೂ ಅರಣ್ಯ ಇಲಾಖೆಗೆ ಸೇರಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ಉತ್ತರಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿತು.

Related Articles

Comments (0)

Leave a Comment