ಧರ್ಮಸ್ಥಳ ಪ್ರಕರಣ; ವಕೀಲ ಮಂಜುನಾಥ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ
- by Jagan Ramesh
- September 9, 2025
- 10 Views

ಬೆಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ವಿಚಾರವಾಗಿ ಸುಳ್ಳು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಕೀಲ ಎನ್. ಮಂಜುನಾಥ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಬೆಳ್ತಂಗಡಿ ಠಾಣೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಇದೇ ವೇಳೆ, ವಕೀಲ ಮಂಜುನಾಥ್ ಅವರಿಗೆ ಸೆಪ್ಟೆಂಬರ್ 1ರಂದು ನೀಡಲಾಗಿದ್ದ ಸಮನ್ಸ್ಗೆ ಅರ್ಜಿಯ ಮುಂದಿನ ವಿಚಾರಣೆವರೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಬೆಂಗಳೂರಿನ ವಕೀಲ ಎನ್. ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಜತೆಗೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ಪ್ರಕರಣದ ದೂರುದಾರ ಧರ್ಮಸ್ಥಳದ ನಿವಾಸಿ ರಘುರಾಮ ಶೆಟ್ಟಿ (44) ಹಾಗೂ ಬೆಳ್ತಂಗಡಿ ಠಾಣೆ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಪೀಠ, ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿದೆ.
ಕಕ್ಷಿದಾರರ ಮಾಹಿತಿ ಅಥವಾ ಅವರಿಗೆ ನೀಡಿದ ಸಲಹೆಗೆ ಸಂಬಂಧಿಸಿದಂತೆ ಕಾನೂನು ವೃತ್ತಿಪರರಿಗೆ (ವಕೀಲರಿಗೆ) ತನಿಖಾ ಸಂಸ್ಥೆಗಳು/ಪೊಲೀಸರು ಸಮನ್ಸ್ ಜಾರಿ ಮಾಡುವುದು ಅಸಮರ್ಥನೀಯ ಹಾಗೂ ಕಾನೂನು ವೃತ್ತಿಯ ಸ್ವಾಯತ್ತತೆಗೆ ಒಡ್ಡುವ ಬೆದರಿಕೆ ಎನಿಸಿಕೊಳ್ಳಲಿದೆ ಎಂದು ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣವೇನು?
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 30ರಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ವಕೀಲ ಮಂಜುನಾಥ್, ಎಸ್ಐಟಿ ಧರ್ಮಸ್ಥಳದಲ್ಲಿ ಶ್ರದ್ಧೆಯಿಂದ ಕೆಲಸ ಮುಂದುವರಿಸುತ್ತಿದ್ದು, ಗುರುತಿಸಲಾದ ಪ್ರತಿಯೊಂದು ಸ್ಥಳದಲ್ಲಿ ಹೂಳಲಾದ ಶವಗಳ ಸಂಖ್ಯೆಯ ಬಗ್ಗೆ ದೂರುದಾರರು, ಸಾಕ್ಷಿದಾರರು ಒದಗಿಸಿದ ನಿರ್ದಿಷ್ಟ ಮಾಹಿತಿಯ ಕುರಿತು ಒಳನೋಟಗಳನ್ನು ಪಡೆಯಲಾಗಿದೆ. ಸೈಟ್ ಸಂಖ್ಯೆ 1ರಲ್ಲಿ 2 ಮೃತದೇಹಗಳು, ಸೈಟ್ ಸಂಖ್ಯೆ 2 ಮತ್ತು 3ರಲ್ಲಿ ತಲಾ 2 ದೇಹಗಳು, ಸೈಟ್ ಸಂಖ್ಯೆ 4 ಮತ್ತು 5ರಲ್ಲಿ ತಲಾ 6 ದೇಹಗಳು, ಸೈಟ್ ಸಂಳ್ಯೆ 6, 7 ಹಾಗೂ 8ರಲ್ಲಿ ತಲಾ 8 ದೇಹಗಳು, ಸೈಟ್ ಸಂಖ್ಯೆ 9ರಲ್ಲಿ 6ರಿಂದ 7 ಹೆಣಗಳು, ಸೈಟ್ ಸಂಖ್ಯೆ 10ರಲ್ಲಿ 3 ಹಾಗೂ 11ರಲ್ಲಿ 9 ದೇಹಗಳು, ಸೈಟ್ ಸಂಖ್ಯೆ 12ರಲ್ಲಿ 4ರಿಂದ 5 ದೇಹಗಳು ಹಾಗೂ ಸೈಟ್ ಸಂಖ್ಯೆ 13ರಲ್ಲಿ ಅತಿ ಹೆಚ್ಚು ಮೃತದೇಹಗಳು ಇರುವುದಾಗಿ ತಮ್ಮ ಗಮನಕ್ಕೆ ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.
ಈ ಸಂಬಂಧ ಆಗಸ್ಟ್ 22ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ರಘುರಾಮ ಶೆಟ್ಟಿ, ವಕೀಲರಾಗಿರುವ ಮಂಜುನಾಥ್ ಅವರು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ, ಅವರ ನೆಮ್ಮದಿಗೆ ಭಂಗ ತರುವ, ಗುಂಪುಗಳ ನಡುವೆ ದ್ವೇಷ ಭಾವನೆ ಉಂಟು ಮಾಡುವ ರೀತಿಯಲ್ಲಿ ಸುಳ್ಳು ಪತ್ರಿಕಾ ಪ್ರಕಣೆ ಹೊರಡಿಸಿದ್ದಾರೆ. ಆದ್ದರಿಂದ, ಆಪಾದಿತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದರು. ದೂರು ಆಧರಿಸಿ, ವಕೀಲ ಮಂಜುನಾಥ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 353(1)ಬಿ, 353(2)ರ ಅಡಿ ಎಫ್ಐಆರ್ ದಾಖಲಿಸಲಾಗಿದೆ.
Related Articles
Thank you for your comment. It is awaiting moderation.
Comments (0)