ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ; ನಂಬಲರ್ಹ ಸಾಕ್ಷಿಗಳಿವೆ ಎಂದ ಹೈಕೋರ್ಟ್

ಬೆಂಗಳೂರು: ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರು ಇತರ ಆರೋಪಿಗಳ ವಿರುದ್ಧದ ವಿಚಾರಣೆಗೆ ತಡೆ ನೀಡಲಾಗಿದೆ ಎಂಬ ಕಾರಣಕ್ಕೆ ತಮಗೆ ಜಾಮೀನು ಕೋರಲಾಗದು ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.

ಅತ್ಯಾಚಾರ ಆರೋಪದಲ್ಲಿ ದಾಖಲಾಗಿರುವ ಮೊದಲನೇ ಪ್ರಕರಣದಲ್ಲಿ ಎರಡನೇ ಬಾರಿ ಜಾಮೀನು ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ನಡೆಸಿತು.

ಪ್ರಜ್ವಲ್‌ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ‌. ನಾವದಗಿ, ಅರ್ಜಿದಾರರ ವಿರುದ್ಧ ಆರೋಪಿಸಲಾಗಿರುವ ಕೃತ್ಯವು 2021ರಲ್ಲಿ ನಡೆದಿದೆ ಎನ್ನಲಾಗಿದ್ದು, ನಾಲ್ಕೂವರೆ ವರ್ಷಗಳ ಬಳಿಕ ದೂರು ದಾಖಲಿಸಲಾಗಿದೆ. ವಿಳಂಬಕ್ಕೆ ಯಾವುದೇ ವಿವರಣೆಯನ್ನೂ ನೀಡಲಾಗಿಲ್ಲ. ಹೀಗಿರುವಾಗ, ಅರ್ಜಿದಾರರು ಇದೇ ರೀತಿ ಮುಂದುವರಿಯಲು ಹೇಗೆ ಸಾಧ್ಯ? ಅವರ ನಿಯಂತ್ರಣದಲ್ಲಿಲ್ಲದ ಕಾರಣಕ್ಕಾಗಿ ಅವರನ್ನು ಜೈಲಿನಲ್ಲಿ ಇರುವಂತೆ ಮಾಡಲಾಗದು ಎಂದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌, ಪ್ರಜ್ವಲ್‌ ಜಾಮೀನು ಅರ್ಜಿ ಸುಪ್ರೀಂಕೋರ್ಟ್‌ನಲ್ಲೂ ತಿರಸ್ಕೃತವಾಗಿತ್ತು. ಆನಂತರ, ಪ್ರಕರಣದ ಸನ್ನಿವೇಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇತರ ಆರೋಪಿಗಳ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ಇದೆ. ಆದರೆ, ಪ್ರಜ್ವಲ್‌ ವಿರುದ್ದ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಆಗ ನ್ಯಾಯಪೀಠ, ಇತರ ಆರೋಪಿಗಳ ವಿರುದ್ಧ ತಡೆಯಾಜ್ಞೆ ಇದ್ದರೂ ನಿಮ್ಮ (ಪ್ರಜ್ವಲ್‌) ವಿರುದ್ಧ ನಂಬಲರ್ಹ (COGENT) ಸಾಕ್ಷಿಗಳಿವೆ. ವಿಶೇಷ ಕಾರಣ ತೋರಿಸದ ಹೊರತು ಜಾಮೀನು ನೀಡಲು ಹೇಗೆ ಸಾಧ್ಯ? ನಿಮ್ಮ ವಾದ ಆಲಿಸಲಾಗುವುದು ಎಂದು ತಿಳಿಸಿತಲ್ಲದೆ, ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿಸಿ, ವಿಚಾರಣೆಯನ್ನು ಏಪ್ರಿಲ್‌ 15ಕ್ಕೆ ಮುಂದೂಡಿತು.

ಎರಡನೇ ಬಾರಿ ಜಾಮೀನು ಅರ್ಜಿ:
ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ ವಜಾಗೊಳಿಸಿತ್ತು‌. ಬಳಿಕ ಸುಪ್ರೀಂಕೋರ್ಟ್‌ ಸಹ ಪ್ರಜ್ವಲ್‌‌ಗೆ ಜಾಮೀನು ನಿರಾಕರಿಸಿತ್ತು. ಕಳೆದ ಮಾರ್ಚ್‌ನಲ್ಲಿ ಪ್ರಜ್ವಲ್‌ ಮತ್ತೆ ಎರಡನೇ ಬಾರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಮೊದಲನೇ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ಅವರನ್ನು ಆರೋಪ ಮುಕ್ತಗೊಳಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯ, ಆರೋಪ ನಿಗದಿ ಮಾಡಿ ಆದೇಶಿಸಿತ್ತು.

Related Articles

Comments (0)

Leave a Comment