ಹೈಕೋರ್ಟ್ ಮೆಟ್ಟಿಲೇರಲು ಸಿಎಂ ಸಿದ್ದರಾಮಯ್ಯ ಸಿದ್ಧತೆ

ಬೆಂಗಳೂರು: ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್‌‌ಚಂದ್‌ ಗೆಹಲೋತ್ ನೀಡಿರುವ ಅನುಮತಿ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದು, ಈಗಾಗಲೇ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತವರ ತಂಡದೊಂದಿಗೆ ಮಾತುಕತೆ ನಡೆಸಿದ್ದಾರೆ.

ಮತ್ತೊಂದೆಡೆ ಭಾನುವಾರ‌ ಸುಪ್ರೀಂಕೋರ್ಟ್ ಹಿರಿಯ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಹಾಗೂ ಕಪಿಲ್ ಸಿಬಲ್ ಬೆಂಗಳೂರಿಗೆ ಬರುತ್ತಿದ್ದು, ಅವರೊಂದಿಗೂ ಚರ್ಚೆ ನಡೆಸಲಾಗುತ್ತದೆ.

ಸೋಮವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿದ್ದು, ಅಂದೇ ಅವರ ಪರ ವಕೀಲರು ನ್ಯಾಯಪೀಠದ ಮುಂದೆ ಹಾಜರಾಗಿ ಅರ್ಜಿಯ ತುರ್ತು ವಿಚಾರಣೆಗೆ ಪರಿಗಣಿಸಿ, ಪ್ರಾಸಿಕ್ಯೂಷನ್‌ಗೆ ಅನುಮತಿ‌ ನೀಡಿ ರಾಜ್ಯಪಾಲರು ಹೊರಡಿಸಿರುವ ಆದೇಶ ರದ್ದುಪಡಿಸಬೇಕೆಂದು ಮನವಿ ಮಾಡಲಿದ್ದಾರೆ. ಜತೆಗೆ, ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಲಿದ್ದಾರೆ ಎಂದು ಉನ್ನತಮಟ್ಟದ ಮೂಲಗಳು “ಲೀಗಲ್ ಸಮಾಚಾರ್” ಗೆ ದೃಢಪಡಿಸಿವೆ.

ಹೈಕೋರ್ಟ್‌ಗೆ ಕೇವಿಯೇಟ್ ಸಲ್ಲಿಕೆ:
ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ಬೆನ್ನಲ್ಲೇ, ಹೈಕೋರ್ಟ್‌ಗೆ ಕೇವಿಯೇಟ್ ಅರ್ಜಿಯೊಂದು ದಾಖಲಾಗಿದೆ. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಒಂದೊಮ್ಮೆ ಸಿದ್ದರಾಮಯ್ಯ ಅರ್ಜಿ ಸಲ್ಲಿಸಿ ಯಾವುದಾದರೂ ಮಧ್ಯಂತರ ಆದೇಶ ಹೊರಡಿಸಲು ಮನವಿ ಮಾಡಿದರೆ, ಅದಕ್ಕೆ ಆಕ್ಷೇಪಣೆ ಸಲ್ಲಿಸಲು ತಮಗೆ ಅವಕಾಶ ನೀಡಬೇಕು ಹಾಗೂ ತಮ್ಮ ವಾದವನ್ನೂ ಆಲಿಸಬೇಕು ಎಂದು ಬೆಂಗಳೂರಿನ‌ ನಾಗರಬಾವಿಯ ನಿವಾಸಿ ಎಸ್.ಪಿ.ಪ್ರದೀಪ್ ಕುಮಾರ್ ಕೇವಿಯಟ್ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದ ಮೂವರಲ್ಲಿ ಎಸ್.ಪಿ. ಪ್ರದೀಪ್ ಸಹ ಒಬ್ಬರಾಗಿದ್ದಾರೆ. ಪ್ರದೀಪ್ ಪರವಾಗಿ ವಕೀಲ ಎಂ.ಎಚ್.‌ಪ್ರಕಾಶ್ ವಕಾಲತ್ತು ವಹಿಸಿದ್ದಾರೆ.

Related Articles

Comments (0)

Leave a Comment