ಕೆಪಿಎಸ್‌ಸಿ ಕ್ಲೀನ್ ಮಾಡುವ ಕೆಲಸ ನ್ಯಾಯಾಲಯವೇ ಆರಂಭಿಸುತ್ತದೆ; ಅಕ್ರಮ ನೇಮಕಾತಿಗಳಿಗೆ ಹೈಕೋರ್ಟ್ ಕಿಡಿ
- by Prashanth Basavapatna
- March 6, 2025
- 325 Views

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿನ (ಕೆಪಿಎಸ್‌ಸಿ) ಅಕ್ರಮ ನೇಮಕಾತಿಗಳ ಸಂಬಂಧ ತೀವ್ರ ಅಸಮಾಧಾನ ಹೊರಹಾಕಿರುವ ಹೈಕೋರ್ಟ್, ಆಯೋಗವನ್ನು ಸ್ವಚ್ಛಗೊಳಿಸಬೇಕಿದ್ದು, ಆ ಕೆಲಸವನ್ನು ನ್ಯಾಯಾಲಯವೇ ಆರಂಭಿಸುತ್ತದೆ. ಅಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಸಾರ್ವಜನಿಕರ ಮುಂದೆ ಬಿಚ್ಚಿಡಲಾಗುವುದು ಎಂದು ಕಿಡಿಕಾರಿದೆ.
ಸಹಾಯಕ ಇಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಯೋಗ ಮಾಡಿರುವ ಶಿಫಾರಸಿಗೆ ತಡೆ ನೀಡಲು ನಿರಾಕರಿಸಿದ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ಸರ್ಕಾರ ಆಯೋಗವನ್ನು ಶುದ್ಧೀಕರಿಸಬೇಕಿತ್ತು. ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆ ಕೆಲಸವನ್ನು ನಾವೇ ಆರಂಭಿಸತ್ತೇವೆ. ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ. ಆಯೋಗದ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯತ್ತೇವೆ. ಶುದ್ಧೀಕರಣ ಪ್ರಕ್ರಿಯೆಯನ್ನು ನಾವೇ ಆರಂಭಿಸುತ್ತೇವೆ. ಈ ವಿಚಾರದಲ್ಲಿ 4-5 ತಲೆಗಳು ಉರುಳಿದಾಗಲೇ ಸರಿ ಹೋಗುವುದು. ಎಲ್ಲ ಕಡೆ ಕೆಟ್ಟವರು ಇರುತ್ತಾರೆ ಎಂದಲ್ಲ. ಒಳ್ಳೆಯವರೂ ಇರುತ್ತಾರೆ. ಆದರೆ, ಕೆಟ್ಟವರು ಒಳ್ಳೆಯವರನ್ನು ಬಿಡುವುದಿಲ್ಲ. ಆದ್ದರಿಂದ, ನಾವು ಆಯೋಗದ ನೇಮಕದಲ್ಲಿ ಪಾರದರ್ಶಕತೆ ತರಲು ಏನೆಲ್ಲ ಮಾಡಬೇಕೋ ಅದನ್ನು ಮಾಡೋಣ. ಆ ವ್ಯವಸ್ಥೆಯನ್ನು ಉಳಿಸಬೇಕಿದೆ. ಇಲ್ಲವಾದರೆ, ಮುಂದಿನ ತಲೆಮಾರಿಗೆ ನಾವು ಏನು ಉತ್ತರಿಸಬೇಕು ಎಂದು ಬೇಸರಿಂದ ನುಡಿಯಿತು.
ಎಲ್ಲವನ್ನೂ ಜನರ ಮುಂದಿಡುತ್ತೇವೆ:
ಈ ಮಧ್ಯೆ, ಕೆಪಿಎಸ್‌ಸಿ ಪರ ಹಾಜರಾದ ಹಿರಿಯ ವಕೀಲ ರೊಬೆನ್ ಜಾಕೋಬ್, ನೇಮಕದಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಕುರಿತು ಒಂಎಂಆರ್ ಶೀಟ್‌ಗಳು, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿ, ಪೆನ್‌ಡ್ರೈವ್ ಸೇರಿ ಎಲ್ಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು.
ಅದನ್ನು ದಾಖಲಿಸಿಕೊಂಡ ನ್ಯಾಯಾಲಯ, ಮೊದಲಿಗೆ ಕೆಲವು ವಕೀಲರ ಸಮಕ್ಷಮದಲ್ಲಿ ಮುಚ್ಚಿದ ಲಕೋಟೆಯಲ್ಲಿ ವಿವರಗಳನ್ನು ಪರಿಶೀಲಿಸುತ್ತೇವೆ. ಅಗತ್ಯ ಬಿದ್ದರೆ ಎಲ್ಲ ವಿವರಗಳನ್ನು ಸಾರ್ವಜನಿಕವಾಗಿ ಬಿಚ್ಚಿಡುತ್ತೇವೆ. ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಟಿವಿಗಳನ್ನು ಹಾಕಿಸಿ ಆಯೋಗದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸಲಾಗುವುದು ಎಂದು ತೀಕ್ಷ್ಣವಾಗಿ ಹೇಳಿತು.
ಕ್ರಿಮಿನಲ್ ಕೇಸ್‌ಗಳ ವಿವರ ಕೇಳಿದ ಕೋರ್ಟ್:
ವಿಚಾರಣೆ ವೇಳೆ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರನ್ನು ಕುರಿತು ನ್ಯಾಯಪೀಠ, ಆಯೋಗವನ್ನು ಸರಿ ಮಾಡಲು ನ್ಯಾಯಾಲಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವಂತೆ ಸೂಚಿಸಿತು. ಅದಕ್ಕೆ ಸಮ್ಮತಿಸಿದ ಎಜಿ, ಸರ್ಕಾರವೂ ಅದೇ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ವ್ಯವಸ್ಥೆಯನ್ನು ಸುಧಾರಿಸುವ ದೃಷ್ಟಿಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ದೊಡ್ಡ ಕುಳಗಳ ಕೈವಾಡ ಇಲ್ಲದೆ ಇಂಥ ಅಕ್ರಮಗಳೆಲ್ಲ ನಡೆಯುವುದಿಲ್ಲ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಆಯೋಗದ ಯಾವ್ಯಾವ ಸದಸ್ಯರು, ಸಿಬ್ಬಂದಿಯ ಮೇಲೆ ಎಷ್ಟು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಅವುಗಳು ಯಾವ ಹಂತದಲ್ಲಿವೆ ಎಂಬ ವಿವರಗಳನ್ನು ಮುಂದಿನ ವಿಚಾರಣೆ ವೇಳೆ ಒದಗಿಸುವಂತೆ ಎಜಿಗೆ ನಿರ್ದೇಶನ ನೀಡಿತು.
Related Articles
Thank you for your comment. It is awaiting moderation.
Comments (0)