ರಾಜ್ಯದಲ್ಲಿ ನಿಲ್ಲದ ಮಕ್ಕಳ ಭಿಕ್ಷಾಟಣೆ; ಸರ್ಕಾರದ ಕಾರ್ಯವೈಖರಿಗೆ ಹೈಕೋರ್ಟ್ ಅಸಮಾಧಾನ

ಬೆಂಗಳೂರು: ಕಳೆದ 4 ವರ್ಷಗಳಲ್ಲಿ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಂದ ಅಂದಾಜು 7,093 ಕೋಟಿ ರೂ. ಭಿಕ್ಷುಕರ ಸೆಸ್‌ ಸಂಗ್ರಹ ಮಾಡಿದೆ. ಆದರೂ, ಸಹ ರಸ್ತೆಗಳಲ್ಲಿ ಮಕ್ಕಳ ಭಿಕ್ಷಾಟನೆ ಮುಂದುವರಿದಿದೆ. ಇದು ರಾಜ್ಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಹೈಕೋರ್ಟ್ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರಕ್ಕೆ ನಿರ್ದೇಶಿಸುವಂತೆ ‘ಲೆಟ್ಜ್‌ ಕಿಟ್‌ ಫೌಂಡೇಷನ್‌’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಸ್ಥಳೀಯ ಸಂಸ್ಥೆಗಳು ಸಂಗ್ರಹ ಮಾಡಿರುವ ಭಿಕ್ಷುಕರ ಸೆಸ್‌ ಅನ್ನು ವಸೂಲಿ ಮಾಡಲು ಸರ್ಕಾರದ ವತಿಯಿಂದ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ನಿರ್ದೇಶಿಸಿ, ವಿಚಾರಣೆಯನ್ನು 8 ವಾರಗಳ ಕಾಲ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ಆರ್‌. ರಮೇಶ್‌ ವಾದ ಮಂಡಿಸಿ, ಸರ್ಕಾರವೇ ನೀಡಿರುವ ಮಾಹಿತಿಯಂತೆ 2021-22ರಿಂದ 2024-25ರವರೆಗೆ 4 ವರ್ಷಗಳ ಅವಧಿಯಲ್ಲಿ ಸರ್ಕಾರ ಒಟ್ಟು 7,093 ಕೋಟಿ ರೂ. ಸೆಸ್‌ ಸಂಗ್ರಹ ಮಾಡಿದ್ದು, ಅದರಲ್ಲಿ 3,453 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನೂ ಸ್ಥಳೀಯ ಸಂಸ್ಥೆಗಳು 3,639 ಕೋಟಿ ರೂ. ವರ್ಗಾಯಿಸಬೇಕಿದೆ. ಸಾವಿರಾರು ಕೋಟಿ ಖರ್ಚಾದರೂ ಮಕ್ಕಳ ಭಿಕ್ಷಾಟನೆ ನಿಂತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಆಗ, ಭಿಕ್ಷಾಟನೆ ನಿರ್ಮೂಲನೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ವಿವರಿಸಿದ ಸರ್ಕಾರದ ಪರ ವಕೀಲರು, ಸ್ಥಳೀಯ ಸಂಸ್ಥೆಗಳು ಸಂಗ್ರಹ ಮಾಡಿರುವ ಸೆಸ್‌ ಹಣವನ್ನು ಸರ್ಕಾರಕ್ಕೆ ವರ್ಗಾ ಮಾಡುತ್ತಿಲ್ಲ. ಆ ಕುರಿತು ಸ್ಥಳೀಯ ಸಂಸ್ಥೆಗಳಿಗೆ ಜ್ಞಾಪನಾ ಪತ್ರಗಳನ್ನು ಕಳುಹಿಸಲಾಗುತ್ತಿದೆ ಎಂದರು.

ಅಂತಿಮವಾಗಿ ನ್ಯಾಯಪೀಠ, ಎಷ್ಟು ಸೆಸ್‌ ಸಂಗ್ರಹ ಮಾಡಲಾಗಿದೆ, ಎಷ್ಟು ವೆಚ್ಚ ಮಾಡಲಾಗಿದೆ ಹಾಗೂ ಬಾಕಿ ಹಣ ಎಷ್ಟಿದೆ ಎಂಬ ಬಗ್ಗೆ ಲೆಕ್ಕ ನೀಡುವಂತೆ ಸರ್ಕಾರಕ್ಕೆ ಸೂಚಿಸಿತಲ್ಲದೆ, ಸೆಸ್‌ ಸಂಗ್ರಹದ ಕುರಿತು ಎಲ್ಲ ಅಂಕಿ-ಅಂಶ ಸಂಗ್ರಹಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ಸೂಚನೆ ನೀಡಿತು. ಮಾಹಿತಿ ಸಂಗ್ರಹಕ್ಕೆ ಪ್ರಾಧಿಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುವಂತೆ ನಿರ್ದೇಶಿಸಿದ ಪೀಠ, 8 ವಾರಗಳಲ್ಲಿ ವರದಿ ಸಲ್ಲಿಸಲು ಸರ್ಕಾರ ಹಾಗೂ ಕೆಎಸ್‌ಎಲ್‌ಎಸ್‌ಎಗೆ ಆದೇಶಿಸಿತು.

Related Articles

Comments (0)

Leave a Comment