ವ್ಹೀಲಿಂಗ್ ವಿರುದ್ಧ ಕಠಿಣ ಕ್ರಮ ಅಗತ್ಯ; ಕಾನೂನು ತಿದ್ದುಪಡಿ ಮಾಡಲು ಸರ್ಕಾರಕ್ಕೆ ಹೈಕೋರ್ಟ್ ಸಲಹೆ
- by Prashanth Basavapatna
- May 12, 2025
- 63 Views

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವ್ಹೀಲಿಂಗ್‌ನಂತಹ ಅಪಾಯಕಾರಿ ಚಟುವಟಿಕೆ ಹೆಚ್ಚುತ್ತಿದ್ದು, ಅದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತದರ ಕಾನೂನು ಜಾರಿ ಸಂಸ್ಥೆಗಳು ಸೂಕ್ತ ಕಾನೂನು ನಿಬಂಧನೆಗಳನ್ನು ರೂಪಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಪಾಯಕಾರಿ ವ್ಹೀಲಿಂಗ್ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಯುವಕನೊಬ್ಬನಿಗೆ ಜಾಮೀನು ನಿರಾಕರಿಸಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಅರ್ಬಾಜ್ ಖಾನ್ ಅಲಿಯಾಸ್ ಅರ್ಬಾಜ್ (29) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ವ್ಹೀಲಿಂಗ್‌ನಂಥ ವಿವೇಚನಾರಹಿತ ಚಾಲನೆ ನಿಯಂತ್ರಿಸಲು ಪ್ತಸ್ತುತ ಕಾನೂನಿನಲ್ಲಿನ ನಿಬಂಧನೆಗಳು ಸಮರ್ಪಕವಾಗಿಲ್ಲ ಎಂಬುದನ್ನು ಶಾಸಕಾಂಗ ಮನಗಾಣಬೇಕು. ಶಾಸನದ ಕೊರತೆಯನ್ನು ಗಮನಿಸಿ ಅದಕ್ಕೆ ಹೊಂದಿಕೆಯಾಗುವಂತೆ ಸರ್ಕಾರವು ಭಾರತೀಯ ನಾಗರಿಕ ಸಂಹಿತೆ (ಬಿಎನ್‌ಎಸ್) ಮತ್ತು ಮೋಟಾರು ವಾಹನ (ಎಂವಿ) ಕಾಯ್ದೆಗೆ ಕಠಿಣ ನಿಬಂಧನೆ ಸೇರ್ಪಡೆ ಮಾಡುವ ಮೂಲಕ ಸೂಕ್ತ ತಿದ್ದುಪಡಿ ತರಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಅಪಾಯಕಾರಿಯಾದ ವ್ಹೀಲಿಂಗ್‌ನಂಥ ದುಸ್ಸಾಹಸವನ್ನು ನ್ಯಾಯಾಲಯಗಳು ಪರಿಗಣಿಸಬೇಕಿದ್ದು, ಸಮಾಜದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿ ಅದರ ಮೂಲಕ ಸಾರ್ವಜನಿಕ ಸುವ್ಯವಸ್ಥೆ ಮತ್ತು ಜನರ ರಕ್ಷಣೆ ಹಾಗೂ ಭದ್ರತೆಯ ಮೇಲೆ ಪರಿಣಾಮ ಉಂಟುಮಾಡುವ ಕೆಲವು ನಿರ್ಲಜ್ಜ ಶಕ್ತಿಗಳ ಹುಟ್ಟಡಗಿಸಬೇಕಿದೆ ಎಂದು ತೀಕ್ಷ್ಣವಾಗಿ ನುಡಿದಿದೆ.
ಸಮಾಜದ ಸ್ವಾಸ್ಥ್ಯಕ್ಕೆ ಹಾನಿ:
ಈ ಮೊದಲು ನಗರ ಪ್ರದೇಶಗಳ ಹೆದ್ದಾರಿಗಳಿಗೆ ಸೀಮಿತವಾಗಿದ್ದ ವ್ಹೀಲಿಂಗ್‌ನಂತಹ ಅಪಾಯಕಾರಿ ಚಟುವಟಿಕೆ ಈಗ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದೆ. ಯುವ ಸಮುದಾಯ ಅದನ್ನು ಎದೆಗಾರಿಕೆ ಎಂದು ನಂಬಿದ್ದು, ಇಂಥ ಚಟುವಟಿಕೆಯಿಂದ ಆಗಬಹುದಾದ ಗಂಭೀರ ಹಾನಿಯ ಬಗ್ಗೆ ಅವರಿಗೆ ಅರಿವಿಲ್ಲ. ವ್ಹೀಲಿಂಗ್ ದ್ವಿಚಕ್ರ ವಾಹನ ಚಾಲಕ, ಹಿಂಬದಿಯ ಸವಾರ ಮಾತ್ರವಲ್ಲದೇ ಸಾಮಾನ್ಯ ಜನರಿಗೂ ಗಂಭೀರ ಬೆದರಿಕೆಯಾಗಿದೆ. ಈ ಕೃತ್ಯದಲ್ಲಿ ತೊಡಗುವ ಕೆಲ ವಿವೇಚನಾರಹಿತ ಯುವಕರು ನಿಸ್ಸಂಶಯವಾಗಿ ಸಮಾಜದ ಸ್ವಾಸ್ಥ್ಯ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಆರೋಪಿಗಿಲ್ಲ ಜಾಮೀನು:
ಹಾಲಿ ಪ್ರಕರಣದಲ್ಲಿ ಅರ್ಜಿದಾರನ ವಿರುದ್ಧದ ಜಾಮೀನುರಹಿತ ಅಪರಾಧ ಕೃತ್ಯವೆಸಗಿದ ಆರೋಪಗಳಿಲ್ಲದಿದ್ದರೂ, ಆತ ಹವ್ಯಾಸಿ ತಪ್ಪಿತಸ್ಥನಾಗಿದ್ದಾನೆ. ಜತೆಗೆ, ವ್ಹೀಲಿಂಗ್ ಮಾಡುವ ಸಂದರ್ಭದಲ್ಲಿ ಕೆಳಗೆ ಬಿದ್ದ ಸಂದರ್ಭದಲ್ಲಿ ನೆರವಿಗೆ ತೆರಳಿದ ಪೊಲೀಸರನ್ನೇ ನಿಂದಿಸಿ, ಹಲ್ಲೆ ನಡೆಸಿರುವುದಲ್ಲದೆ, ಅವರ ಮೊಬೈಲ್‌ಗಳನ್ನು ಕಿತ್ತೆಸೆದಿದ್ದಾನೆ ಎನ್ನಲಾಗಿದೆ. ಆರೋಪಿ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಜಾಮೀನು ನೀಡಬೇಕೆಂದಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಆರೋಪಿಯ ಅರ್ಜಿ ವಜಾಗೊಳಿಸಿದೆ.
ಪ್ರಕರಣವೇನು?
ದೂರಿನ ಸಾರಾಂಶದ ಪ್ರಕಾರ, 2024ರ ಅಕ್ಟೋಬರ್ 9ರಂದು ಸಂಜೆ 4.30ರ ವೇಳೆಗೆ ಗಂಗಾವತಿಯ ಹೇಮಗುಡ್ಡ ದುರ್ಗಮ್ಮ ದೇವಸ್ಥಾನದ ಬಳಿ ಮೂವರು ಯಮಹಾ ಆರ್‌ಎಕ್ಸ್ ಬೈಕ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು. ಗಸ್ತಿನಲ್ಲಿದ್ದ ದೂರುದಾರ ಪೊಲೀಸರು ಹಿಡಿಯಲು ಮುಂದಾದಾಗ ಬೈಕ್ ಆಯತಪ್ಪಿ, ವ್ಹೀಲಿಂಗ್ ಮಾಡುತ್ತಿದ್ದವರು ನೆಲಕ್ಕೆ ಬಿದ್ದಿದ್ದರು.
ನೆರವಿಗೆ ಧಾವಿಸಿದ ಪೊಲೀಸರನ್ನೇ ನೆಲಕ್ಕೆ ಬಿದ್ದ ಗಾಯಾಳುಗಳು ನಿಂದಿಸಲಾರಂಭಿಸಿದ್ದರಲ್ಲದೆ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಅವರ ಫೋನ್ ಕಸಿದು ತುಂಗಭದ್ರಾ ಕ್ಯಾನಲ್‌ಗೆ ಎಸೆದಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸರಿಗೆ ನಿಮ್ಮಿಂದಲೇ ನಮ್ಮ ಮೊಣಕೈಗೆ ಗಾಯವಾಗಿದೆ ಎಂದು ವಾಕ್ಸಮರ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಬಿಎನ್‌ಎಸ್ ಹಾಗೂ ಎಂವಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ, ಪೊಲೀಸರು ಪ್ರಕರಣದ ಸಂಬಂಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
CRL.P 101267/2025
Arbaz Khan vs State of Karnataka
Related Articles
Thank you for your comment. It is awaiting moderation.
Comments (0)