ಕೋಮು ದ್ವೇಷ ಭಾಷಣ ಆರೋಪ; ಎಫ್‌ಐಆರ್ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಶಾಸಕ ಹರೀಶ್ ಪೂಂಜಾ

ಬೆಂಗಳೂರು: ಕೋಮು ದ್ವೇಷ ಹರಡಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಮತ್ತದರ ಸಂಬಂಧಿತ ಕಾನೂನು ಪ್ರಕ್ರಿಯೆ ರದ್ದು ಕೋರಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತೆಕ್ಕಾರುವಿನ ಎಸ್‌.ಬಿ. ಇಬ್ರಾಹಿಂ ಸಲ್ಲಿಸಿರುವ ದೂರು ಆಧರಿಸಿ ಉಪ್ಪಿನಂಗಡಿ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಹರೀಶ್‌ ಪೂಂಜಾ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಅವರ ಪರ ವಕೀಲರು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾಕಾಲದ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಆಗ ನ್ಯಾಯಮೂರ್ತಿಗಳು, ಇದು ಜನಪ್ರತಿನಿಧಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ಈ ನ್ಯಾಯಾಲಯಕ್ಕೆ ವಿಚಾರಣೆ ನಡೆಸುವ ವ್ಯಾಪ್ತಿ ಇಲ್ಲ. ಮುಖ್ಯ ನ್ಯಾಯಮೂರ್ತಿಗಳಿಂದ ನಿರ್ದೇಶನ ಪಡೆದು, ಸೂಕ್ತ ಆದೇಶವಾದರೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಸಾಕಷ್ಟು ಸಮಾಲೋಚನೆಯ ಬಳಿಕ ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟಂತೆ ಅರ್ಜಿಯನ್ನು ಮೇ 8ರಂದು ವಿಚಾರಣೆಗೆ ಪಟ್ಟಿ ಮಾಡಲು ಆದೇಶಿಸಿದರು.

ಪ್ರಕರಣವೇನು?
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೇ 4ರಂದು ದೂರು ನೀಡಿದ್ದ ಇಬ್ರಾಹಿಂ, ಮೇ 3ರಂದು ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮ ಕಲಶೋತ್ಸವದಲ್ಲಿ ಹರೀಶ್‌ ಪೂಂಜಾ ಅವರು ರಾತ್ರಿ ಸುಮಾರು 9.30ರ ವೇಳೆಗೆ ತುಳು ಭಾಷೆಯಲ್ಲಿ ಮಾತನಾಡುತ್ತಾ, ತೆಕ್ಕಾರಿನ ಕಂತ್ರಿ ಬ್ಯಾರಿಗಳು ಟ್ಯೂಬ್ಲೈಟ್‌ ಹೊಡೆದಿದ್ದಾರೆ. ಜನರೇಟರ್‌ನ ಡೀಸೆಲ್‌ ಕದ್ದಿದ್ದಾರೆ ಎಂಬ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂದಿದೆ. ಬ್ರಹ್ಮ ಕಲಶೋತ್ಸವ ಮುಗಿಯುವ ವೇಳೆಗೆ ಕದ್ದಿರುವವರು ಯಾರು ಎಂದು ತಿಳಿಯುತ್ತದೆ. ನಮ್ಮಲ್ಲಿ ಸೌಹಾರ್ದತೆ ಬೇಕು ಎಂದು ಹೇಳುತ್ತಾರೆ. ಮಸೀದಿಗೆ ಹೋಗಿ ಆಮಂತ್ರಣ ಕೊಟ್ಟಿದ್ದರಿಂದ ಬ್ಯಾರಿಗಳು ಟ್ಯೂಬ್‌ ಹೊಡೆದಿದ್ದಾರೆ. ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲೇಬಾರದಿತ್ತು. ನಾವು ಹಿಂದೂಗಳು, ಹಿಂದೂಗಳೇ ಅವರನ್ನು ಸೇರಿಸಬಾರದು ಎಂಬ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿದ್ದರು.

ಪ್ರಸ್ತುತ ತೆಕ್ಕಾರಿನಲ್ಲಿ 1,200 ಮುಸ್ಲಿಮರಿದ್ದು, ನಾವು 150 ಮನೆಯವರು ಇದ್ದೇವೆ. ಇನ್ನು 10 ವರ್ಷ ಕಳೆದರೆ 5 ಸಾವಿರ ಜನರಾಗುತ್ತಾರೆ. ಮುಸ್ಲಿಮರು ಐದು ಸಾವಿರ ಅಲ್ಲ 10 ಸಾವಿರ ಆದರೂ ಅವರನ್ನು ಹೆದರಿಸಿ, ನೀವು ಸನಾತನ ಹಿಂದೂ ಧರ್ಮವನ್ನು ಪಾಲನೆ ಮಾಡಿ, ದೇವರ ಪೂಜೆ ಮಾಡಿಕೊಂಡ ಬರಬೇಕು ಎಂದು ಹೇಳಿದ್ದಾರೆ. ಈ ಮೂಲಕ ಸಮುದಾಯಗಳ ನಡುವೆ ದ್ವೇಷ ಹರಿಡಿದ್ದಾರೆ. ಈ ಸಂಬಂಧದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲೂ ವೀಕ್ಷಿಸಿರುವುದಾಗಿ ದೂರಿನಲ್ಲಿ ವಿವರಿಸಿದ್ದರು. ದೂರು ಆಧರಿಸಿ ಪೊಲೀಸರು ಹರೀಶ್‌ ಪೂಂಜಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 196 (ಧರ್ಮದ ಆಧಾರದಲ್ಲಿ ದ್ವೇಷ ಹರಡುವುದು), ಸೆಕ್ಷನ್ 353(2) (ದ್ವೇಷ ಹರಡಲು ಸುಳ್ಳು ಸುದ್ದಿ ಹಂಚಿಕೆ) ಅಡಿ ಪ್ರಕರಣ ದಾಖಲಿಸಿದ್ದಾರೆ.

Related Articles

Comments (0)

Leave a Comment