ಬಿಕ್ಲು ಶಿವ ಕೊಲೆ; ಬೈರತಿ ಬಸವರಾಜ್ ಬಂಧಿಸದಂತೆ ನೀಡಿರುವ ಮಧ್ಯಂತರ ಆದೇಶ ತೆರವಿಗೆ ಸಿಐಡಿ ಮನವಿ

ಬೆಂಗಳೂರು: ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಕೆ.ಆರ್‌. ಪುರ ಶಾಸಕ ಬೈರತಿ ಬಸವರಾಜ್‌ ಅವರನ್ನು ಬಂಧಿಸದಂತೆ ಹೊರಡಿಸಿರುವ ಮಧ್ಯಂತರ ಆದೇಶ ತೆರವುಗೊಳಿಸುವಂತೆ ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಪ್ರಕರಣದಲ್ಲಿ ‘ಕರ್ನಾಟಕ ರಾಜ್ಯ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ’ (ಕೊಕಾ) ನಿಯಮಗಳನ್ನು ಹೇರಲು ಸಿಐಡಿ ಉಪ ಅಧೀಕ್ಷಕರಿಗೆ ಅನುಮತಿ ನೀಡಿ ಸಿಐಡಿ ಪೊಲೀಸ್‌ ಮಹಾ ನಿರ್ದೇಶಕರು 2025ರ ಆಗಸ್ಟ್ 12ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಬೈರತಿ ಬಸವರಾಜ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿಗೆ ಸಿಐಡಿ ಪೊಲೀಸರ ಪರ ಆಕ್ಷೇಪಣೆ ಸಲ್ಲಿಸಿದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಅರ್ಜಿದಾರರ ಪರವಾಗಿ ನೀಡಲಾಗಿರುವ ಮಧ್ಯಂತರ ರಕ್ಷಣಾ ಆದೇಶ ತೆರವುಗೊಳಿಸಬೇಕು ಎಂದು ಕೋರಿದರು.

ಬೈರತಿ ಬಸವರಾಜ್‌ ಪರ ಹಿರಿಯ ವಕೀಲ ಸಂದೇಶ್‌ ಚೌಟ ಹಾಜರಾಗಿ, ಪ್ರಕರಣದಲ್ಲಿ ಈಗಾಗಲೇ ಅರ್ಜಿದಾರರ ಬಂಧನ ಮಾಡದಂತೆ ತನಿಖಾಧಿಕಾರಿಗಳಿಗೆ ಸೂಚಿಸಿ ಹೈಕೋರ್ಟ್‌ ಮಧ್ಯಂತರ ರಕ್ಷಣೆ ಮಾಡಿದೆ. ತನಿಖಾಧಿಕಾರಿಗಳು ವಿಚಾರಣೆಗೆ ಹಾಜರಾಗಲು ಸೂಚಿಸಿ ಅರ್ಜಿದಾರರಿಗೆ ಎರಡು ಬಾರಿ ಸಮನ್ಸ್ ನೀಡಿದ್ದರು. ಅದರಂತೆ, ಅರ್ಜಿದಾರರು ವಿಚಾರಣೆಗೆ ಹಾಜರಾಗಿ ಅಗತ್ಯ ಸಹಕಾರ ನೀಡಿದ್ದಾರೆ. ಹೀಗಿದ್ದರೂ ತನಿಖೆ/ವಿಚಾರಣೆಗೆ ಸಹರಿಸುತ್ತಿಲ್ಲ. ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಸಿಐಡಿ ಪೊಲೀಸರು ಮಂಡಿಸುತ್ತಿರುವ ವಾದ ಸರಿಯಲ್ಲ ಎಂದು ಆಕ್ಷೇಪಿಸಿದರು.

ಮುಂದುವರಿದು, ಸಿಐಡಿ ಪೊಲೀಸರ ತನಿಖೆಗೆ ಸಹಕರಿಸಲು ಅರ್ಜಿದಾರರು ಸದಾ ಸಿದ್ಧರಿದ್ದಾರೆ. ಯಾವ ಸಮಯಕ್ಕೆ ಹಾಜರಾಗಬೇಕು ಎಂದು ತಿಳಿಸಿದರೆ, ಅದರಂತೆ ಅರ್ಜಿದಾರರು ನಡೆದುಕೊಳ್ಳುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗಿನ ಸಮಯವನ್ನು ತಿಳಿಸಲಿ. ಪ್ರಕರಣದಲ್ಲಿ ಕೊಕಾ ಕಾಯ್ದೆಯ ನಿಯಮಗಳನ್ನು ಹೇರಿರುವುದು ಕಾನೂನುಬಾಹಿರವಾಗಿದೆ. ಕೊಕಾ ಕಾಯ್ದೆ ಅನ್ವಯಿಸಲು ನಿರ್ದಿಷ್ಟ ಅಗತ್ಯಗಳು ಇರಬೇಕು. ಹಾಲಿ ಪ್ರಕರಣದಲ್ಲಿ ಅಂತಹ ಯಾವುದೇ ಅಗತ್ಯಗಳು ಕಾಣುತ್ತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ಮಧ್ಯಂತರ ಆದೇಶವನ್ನು ವಿಸ್ತರಿಸಿತು.

Related Articles

Comments (0)

Leave a Comment