ಬೆಂಗಳೂರು ಗಾರ್ಡನ್ ಸಿಟಿ ಅಲ್ಲ, ಹೋರ್ಡಿಂಗ್ ಸಿಟಿಯಾಗಿದೆ; ರಾಜಕಾರಣಿಗಳ ಫ್ಲೆಕ್ಸ್ ಹಾವಳಿಗೆ ಹೈಕೋರ್ಟ್ ಕಿಡಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಾದ್ಯಂತ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, “ಬೆಂಗಳೂರು ಗಾರ್ಡನ್ ಸಿಟಿ ಬದಲಿಗೆ ಹೋರ್ಡಿಂಗ್ ಸಿಟಿಯಾಗಿದೆ” ಎಂದು ಬೇಸರದಿಂದ ನುಡಿದಿದೆ.

ರಾಜಕೀಯ ನಾಯಕರ ಫ್ಲೆಕ್ಸ್‌ ಮತ್ತು ಹೋರ್ಡಿಂಗ್ಸ್‌ ತೆರವಿಗೆ ಹೈಕೋರ್ಟ್‌ ನೀಡಿರುವ ಆದೇಶದಂತೆ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆಕ್ಷೇಪಿಸಿ ಸಾಮಾಜಿಕ ಕಾರ್ಯಕರ್ತ ಎಚ್‌.ಎಂ. ವೆಂಕಟೇಶ್‌ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಸ್‌. ಮುದ್ಗಲ್‌ ಹಾಗೂ ನ್ಯಾಯಮೂರ್ತಿ ಪಿ. ಶ್ರೀಸುಧಾ ಅವರಿದ್ದ ವಿಭಾಗೀಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಸುನೀಲ್‌ ಪ್ರಸಾದ್‌ ವಾದ ಮಂಡಿಸಿ, ನಗರದ ಹಲವೆಡೆ ಕಂಡುಬಂದ ಜನಪ್ರತಿನಿಧಿಗಳ ಫ್ಲೆಕ್ಸ್‌ಗಳಿರುವ ಛಾಯಾಚಿತ್ರಗಳನ್ನು ಮೆಮೋ ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿ, ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ನಗರದಲ್ಲಿ ಫ್ಲೆಕ್ಸ್‌ ಹಾವಳಿ ಮೀತಿ ಮೀರುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಆದೇಶ ನೀಡಬೇಕೆಂದು ಮನವಿ ಮಾಡಿದರು.

ಬಿಬಿಎಂಪಿ ಪರ ವಕೀಲರು ಪ್ರತಿಕ್ರಿಯಿಸಿ, ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ರಾಜಕೀಯ ನಾಯಕರ ಫ್ಲೆಕ್ಸ್‌ ಅಥವಾ ಹೋರ್ಡಿಂಗ್‌ ಕಂಡುಬಂದರೂ ಪಾಲಿಕೆ ಪ್ರಕರಣ ದಾಖಲಿಸಿ, ದಂಡ ವಿಧಿಸುತ್ತಿದೆ. ಅಂಥ ನಾಯಕರ ವಿರುದ್ಧ ಎಫ್‌ಐಆರ್‌ ಸಹ ದಾಖಲಾಗುತ್ತಿದೆ. ಪಾಲಿಕೆ ಅವುಗಳನ್ನು ಎಷ್ಟೇ ತೆಗೆದರೂ ಮತ್ತೆ ಮತ್ತೆ ಹಾಕಲಾಗುತ್ತಿದೆ ಎಂದು ತಿಳಿಸಿದರು.

ಗಾರ್ಡನ್ ಸಿಟಿ ಅಲ್ಲ; ಹೋರ್ಡಿಂಗ್ ಸಿಟಿ:
ಅದಕ್ಕೆ ನ್ಯಾಯಮೂರ್ತಿಗಳು, ಹೌದು ನಾನೂ ನೋಡಿದ್ದೇನೆ. ದೇವಸ್ಥಾನಗಳನ್ನೂ ಬಿಡದೆ ರಾಜಕೀಯ ನಾಯಕರ ಫ್ಲೆಕ್ಸ್‌ಗಳನ್ನು ಹಾಕುತ್ತಿದ್ದಾರೆ. ಅವುಗಳನ್ನೆಲ್ಲ ಯಾವಾಗ ತೆರವುಗೊಳಿಸಲಾಗುತ್ತದೆ? ಅಂಥವರ ವಿರುದ್ಧ ಬಿಬಿಎಂಪಿ ಏನು ಕ್ರಮ ಜರುಗಿಸುತ್ತಿದೆ? ಇದು ಗಾರ್ಡನ್‌ ಸಿಟಿ ಅಲ್ಲ, ಹೋರ್ಡಿಂಗ್‌ ಸಿಟಿ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ಫ್ಲೆಕ್ಸ್ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಂಡ ಕುರಿತ ವರದಿಯನ್ನು ಇದೇ 23ರೊಳಗೆ ಸಲ್ಲಿಸಬೇಕೆಂದು ಬಿಬಿಎಂಪಿಗೆ ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?
ಸಾರ್ವಜನಿಕರ ತೆರಿಗೆ ಹಣದಿಂದ ಕೈಗೊಳ್ಳುವ ಸರ್ಕಾರಿ ಯೋಜನೆಗಳಲ್ಲಿ ಹಾಕಲಾಗಿರುವ ಶಾಸಕರು ಮತ್ತು ಸಚಿವರ ಹೆಸರು ಮತ್ತು ಛಾಯಾಚಿತ್ರ ತೆರವುಗೊಳಿಸುವಂತೆ ಕೋರಿ 2021ರಲ್ಲಿ ಎಚ್.ಎಂ. ವೆಂಕಟೇಶ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆಗ, ರಾಜಕಾರಣಿಗಳ ಫೋಟೋಗಳನ್ನು ತೆರವುಗೊಳಿಸುವಂತೆ ಹಾಗೂ ಫ್ಲೆಕ್ಸ್ ಹಾವಳಿ ನಿಯಂತ್ರಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಆ ಆದೇಶ ಪಾಲನೆಯಾಗುತ್ತಿಲ್ಲವೆಂದು ಆಕ್ಷೇಪಿಸಿ ಇದೀಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.

Related Articles

Comments (0)

Leave a Comment