ಹೊನ್ನೇಶ್ವರಸ್ವಾಮಿ ದೇವಾಲಯದ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧ ವಾಪಸ್; ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

ಬೆಂಗಳೂರು: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದ ಶ್ರೀ ಹೊನ್ನೇಶ್ವರಸ್ವಾಮಿ ದೇವಾಲಯದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಹಾರ ಸೇವನೆ ನಿಷೇಧಿಸಿ ಹೊರಡಿಸಲಾಗಿರುವ ನೋಟಿಸ್ ಹಿಂಪಡೆದು, ಪ್ರಾಣಿ ಬಲಿಯನ್ನು ಮಾತ್ರ ನಿರ್ಬಂಧಿಸಿ ಹೊಸದಾಗಿ ನೋಟಿಸ್ ಹೊರಡಿಸಲಾಗುವುದು ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಮಾಂಸಹಾರ ಸೇವನೆ ನಿಷೇಧಿಸಿ ಬಡವನಹಳ್ಳಿ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ 2024ರ ಜುಲೈ 13ರಂದು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಶ್ರೀ ಹೊನ್ನೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಟ್ರಸ್ಟ್‌‌ನ ಅಧ್ಯಕ್ಷ ಜೆ. ಮಂಜುನಾಥ ಹಾಗೂ ದೇವಾಲಯದ ಗುರುಗಳಾದ ಜಿ.ಎಸ್. ರಾಮಚಂದ್ರ ಸ್ವಾಮಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲೆ ಕೆ.ಪಿ. ಯಶೋಧ ಹಾಜರಾಗಿ, ದೇವಾಲಯದ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸಾಹಾರ ಸೇವನೆ ನಿಷೇಧಿಸಿ ಈ ಹಿಂದೆ ಹೊರಡಿಸಲಾಗಿದ್ದ ನೋಟಿಸ್ ಹಿಂಡೆಯಲಾಗುವುದು. ದೇವಸ್ಥಾನದ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆಗೆ ಯಾವುದೇ ನಿರ್ಬಂಧವಿಲ್ಲ. ಪ್ರಾಣಿ ಬಲಿಗೆ ಮಾತ್ರ ನಿಷೇಧ ಸೀಮಿತಗೊಳಿಸಿ, ಒಂದು ವಾರದೊಳಗೆ ಹೊಸದಾಗಿ ನೋಟಿಸ್‌ ಹೊರಡಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಆರ್.ಎಸ್. ರವಿ ವಾದ ಮಂಡಿಸಿದ್ದರು.

ಅರ್ಜಿದಾರರ ಮನವಿ:
ಶಿವನಗೆರೆ ಗ್ರಾಮದಲ್ಲಿರುವ ಶ್ರೀ ಹೊನ್ನೇಶ್ವರಸ್ವಾಮಿ ದೇವಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದ್ದು ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಗೊಂದಲಗಳಿಲ್ಲದೆ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳೂ ಸೇರಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಭಕ್ತಾದಿಗಳು ಬರುತ್ತಾರೆ. ಬಹಳ ಹಿಂದಿನಿಂದಲೂ ಮಾಂಸಹಾರ ಸೇವನೆ ಪದ್ದತಿ ಇದೆ. ಆದರೆ, 2024ರ ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ್ದ ಆದೇಶ ಉಲ್ಲೇಖಿಸಿ ದೇವಸ್ಥಾನದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ಹಾಗೂ ಮಾಂಸಹಾರ ಸೇವನೆ ನಿಷೇಧಿಸಿ 2024ರ ಜುಲೈ 13ರಂದು ಬಡವನಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ನೋಟಿಸ್ ಜಾರಿಗೊಳಿಸಿದ್ದಾರೆ. ಇದರಿಂದ, ದೇವಸ್ಥಾನದ ಬಳಿ ಮಾತ್ರವಲ್ಲದೆ ಇಡೀ ಗ್ರಾಮದಲ್ಲಿ ಮಾಂಸಹಾರ ಸೇವನೆ ನಿಷೇಧವಾದಂತಾಗಿದೆ. ಇದು ಗ್ರಾಮಸ್ಥರ ಆಹಾರದ ಹಕ್ಕಿನ ಪ್ರಶ್ನೆಯಾಗಿದ್ದು, ಭಕ್ತಾದಿಗಳ ಹಲವು ವರ್ಷಗಳ ಆಚರಣಾ ಪದ್ದತಿಗೆ ವಿರುದ್ಧವಾಗಿದೆ. ಆದ್ದರಿಂದ, ಪೊಲೀಸರು ನೀಡಿರುವ ನೋಟಿಸ್ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

 

Related Articles

Comments (0)

Leave a Comment