ಪೋಕ್ಸೋ ಪ್ರಕರಣದಲ್ಲಿ ಬಿಎಸ್‌ವೈ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ; ಹೈಕೋರ್ಟ್‌ಗೆ ಸಿಐಡಿ ಮಾಹಿತಿ

ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲಾಗುತ್ತಿದೆ ಎಂದು ಸಿಐಡಿ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದರು.

ಪೋಕ್ಸೋ ಕಾಯ್ದೆಯಡಿ ತಮ್ಮ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಹಾಗೂ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತ ಕೋರಿ ಯಡಿಯೂರಪ್ಪ ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಸಿಐಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯ್ಕ್ ಹಾಜರಾಗಿ, ಪ್ರಕರಣದಲ್ಲಿ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲಾಗುತ್ತಿದೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕಿರುವುದರಿಂದ ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಸಚಿವರ ಹೇಳಿಕೆಗಳಿಗೆ ಆಕ್ಷೇಪ:
ಯಡಿಯೂರಪ್ಪ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು, ದಿನ ಬೆಳಗಾದರೆ ಸರ್ಕಾರದ ಯಾರಾದರೊಬ್ಬ ಸಚಿವರು ಯಡಿಯೂರಪ್ಪ ಅವರನ್ನು ಪೋಕ್ಸೋ ಪ್ರಕರಣದಲ್ಲಿ ಅಭಿಯೋಜನೆಗೆ ಗುರಿಪಡಿಸಲಾಗುತ್ತದೆ. ಅವರು ತನಿಖಾಧಿಕಾರಿಗಳ ಮುಂದೆ ಶರಣಾಗಬೇಕು. ಜೈಲಿಗೆ ಹೋಗುತ್ತಾರೆ, ತಡೆಯಾಜ್ಞೆ ತೆರವಾಗುವಂತೆ ಮಾಡುತ್ತೇವೆ ಎಂದು ಮನಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಹಾಗಿದ್ದರೆ ಅವರೇ ನ್ಯಾಯಾಲಯಕ್ಕೆ ಬಂದು ವಾದ ಮಂಡಿಸಲಿ ಎಂದು ಸವಾಲೆಸೆದರಲ್ಲದೆ, ಅರ್ಜಿದಾರರ ಹಣೆಯಲ್ಲಿ ಜೈಲಿಗೆ ಹೋಗಲೇಬೇಕೆಂದಿದ್ದರೆ ಹೋಗುತ್ತಾರೆ. ಆದರೆ, ಶಾಸಕರು ಹಾಗೂ ಸಂಸದರು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಯಾವಾಗಲೂ ಪೋಸ್ಕೊ, ಪೋಸ್ಕೊ ಎನ್ನುತ್ತಿದ್ದಾರೆ ಎಂದು ಏರುಧ್ವನಿಯಲ್ಲಿ ಹೇಳಿದರು.

ಆಗ ನ್ಯಾಯಮೂರ್ತಿಗಳು, ಅದೇನದು ಪೋಸ್ಕೋ, ಪೋಸ್ಕೋ..? ಅದು ಪೋಕ್ಸೋ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, ಪೋಸ್ಕೊ ಎಂದು ನಾನು ಹೇಳುತ್ತಿಲ್ಲ. ರಾಜಕಾರಣಿಗಳು ಹಾಗೆ ಹೇಳುತ್ತಿದ್ದಾರೆ ಎಂದರು. ಈ ಮಾತುಗಳು ಕೋರ್ಟ್‌ ಹಾಲ್‌ನಲ್ಲಿ ನೆರೆದವರನ್ನು ನಗೆಗಡಲಲ್ಲಿ ತೇಲಿಸಿತು.

ಅಂತಿಮವಾಗಿ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಸೆ.5ಕ್ಕೆ ಮುಂದೂಡಿತಲ್ಲದೆ, ಪ್ರಕರಣ ಸಂಬಂಧ ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ಸಿಐಡಿ ತನಿಖಾಧಿಕಾರಿಗಳಿಗೆ ಸೂಚಿಸಿ ಹಾಗೂ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದರಿಂದ ಯಡಿಯೂರಪ್ಪ ಅವರಿಗೆ ವಿನಾಯಿತಿ ನೀಡಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನೂ ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

Related Articles

Comments (0)

Leave a Comment